Wednesday, June 18, 2008

ಆಕಸ್ಮಿಕ...

ಅಪರೂಪಕ್ಕೆಂದು ಬಸ್ನಲ್ಲಿ ಸೀಟು ದೊರೆಯಿತು. ದೊಡ್ಡ ಕಿಟಕಿ, ಜನ ಜಂಗುಳಿಯೇ ಇಲ್ಲ. ನನ್ನಾನಂದಕ್ಕೆ ಪಾರವೇ ಇಲ್ಲ. ಇನ್ನೇನು ತುಂತುರಿಸಬಹುದು ಎಂಬಂತಹ ವಾತಾವರಣ. ತೇವ ತುಂಬಿ ಭಾರವಾದ ಗಾಳಿ ಮುಖಕ್ಕಪ್ಪಳಿಸಿ ಮುದನೀಡುತ್ತಿತ್ತು. ಕೂತವಳೇ ಕಿವಿಗೆ ಎಂ.ಪಿ.ತ್ರಿ ಹಚ್ಚಿದೆ. ಸೊಗಸಾದ ಕನ್ನಡ ಭಾವಗೀತೆಗಳನ್ನು ಕೇಳುತ್ತಾ ಕಣ್ಮುಚ್ಚಿದೆ. ಟ್ರಾಫಿಕ್ಕಿನ ಖಿನ್ನತೆ ಸ್ವಲ್ಪವೂ ಬಳಿಸುಳಿಯಲಿಲ್ಲ. "ನಾನು ಬಡವಿ..ಆತ ಬಡವ..ಒಲವೆ ನಮ್ಮ ಬದುಕು.." ಕೇಳುತ್ತಾ ಮೈಮರೆತೆ. ಹಾಡಿನ ಭಾವರ್ಥಕ್ಕಿಂತ ಅದರ ರಾಗದ ಶಾಂತತೆ, ಪ್ರೇಮ, ಆತ್ಮವಿಶ್ವಾಸ ನನ್ನನ್ನು ಹೆಚ್ಚಿಗೆ ಕಾಡಿತ್ತು. ರಾಗಾಲಾಪನೆಯನ್ನು ಸವಿಯುತ್ತಾ ಕಣ್ಮುಚ್ಚಿದೆ.

ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ ಬಸ್ ನಿಂತ ಹಾಗೆ ಭಾಸವಾಯಿತು. ಕಣ್ತೆರೆದು ನೋಡಿದರೆ, ರಸ್ತೆಯ ತುಂಬಾ ಜನ, ಪೋಲೀಸರ ಗುಂಪು, ಛಾಯಾಗ್ರಾಹಕರು. ಸಿನಿಮಾ ಚಿತ್ರೀಕರಣ ಇರಬಹುದೆಂದು ಕುತೂಹಲದಿಂದ ನೋಡಿದೆ, ಭಯಾನಕ! ಎದೆ ಜಿಲ್ ಎನ್ನುವ ದೃಶ್ಯ! ನನ್ನಷ್ಟೇ ವಯಸ್ಸಿನ ಹುಡುಗಿಯೊಬ್ಬಳ ಆಕ್ಸಿಡೆಂಟ್, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಒರಟಾದ ರಸ್ತೆಗೆ ಅವಳ ಕೆನ್ನೆ ಹಣೆ ರಾಚಿ ಹೋಗಿದೆ. ಹೋಂಡ ಆಕ್ಟಿವಾನಲ್ಲಿ ಹೊರಟಿದ್ದ ಆ ಹುಡುಗಿಯ ಪ್ರಾಣ ಪಕ್ಷಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು, ಮುಗ್ಗರಿಸಿ, ಬಿದ್ದು ಹಾಗೆಯೇ ಹಾರಿ ಹೋಗಿತ್ತು. ಸುತ್ತಲೂ ಜನ, ಕೆಲವರಿಗೆ ಭಯ ಮತ್ತೆ ಕೆಲವರಿಗೆ ಆಶ್ಚರ್ಯ, ಅಂತು ಎಲ್ಲರು ಸುತ್ತುವರೆದಿದ್ದಾರೆ. ಪೋಲೀಸರ ಓಡಾಟ ನಡುನಡುವೆ ಪತ್ರಿಕೆಯವರ ಫೋಟೋ ಕ್ಲಿಕ್ಕಿಸುವಿಕೆ, ಇವೆಲ್ಲದರ ಮಧ್ಯೆ ಬಿದ್ದು ಜಜ್ಜಿದ ಆ ಒಂದು ನಿರ್ಜೀವ ದೇಹ. ಅದುವರೆಗೂ, ಆ ಕ್ಷಣದವರೆಗೂ ನನ್ನಂತೆಯೇ ಉಸಿರಾಡುತ್ತಿದ್ದ, ಆಫೀಸಿನಿಂದ ಮರಳುತ್ತಿದ್ದ, ನನ್ನಂತೆಯೇ ಕನಸ ಹೊತ್ತಿದ್ದ ಒಂದು ಪ್ರಾಣ ಇನ್ನಿಲ್ಲ!! ಯಾಕೋ ಭಯವಾಯಿತು. ಸಾವು-ನೋವು ಕೇಳಿ ಕಂಡಿದ್ದರೂ, ಈ ರೀತಿ ಒಂದು ಅನುಭವವಾಗಿದ್ದು ಇದೇ ಮೊದಲು. ಅವಳಿಗಾಗಿ ಮನೆಯಲ್ಲಿ ಎಷ್ಟು ಜೀವಗಳು ಮಿಡಿಯುತಿದ್ದಾವೋ! ತಾಯಿ? ತಂದೆ? ಗಂಡ? ಮಗು?! ಎಷ್ಟೋ ವರ್ಷಗಳಿಂದ ಕಾಪಾಡಿ, ಆರೈಕೆ ಮಾಡಿ ಬೆಳೆಸಿದ ದೇಹ ಈಗ ಮಣ್ಣುಪಾಲು!

ಬಸ್ಸು ಮುಂದುವರೆಯಿತು, ಸುತ್ತ ಜನರತ್ತ ಕಣ್ಣು ಹಾಯಿಸಿದೆ, ಎಲ್ಲರೂ ತಮ್ಮ ತಮ್ಮ ಲೋಕಕ್ಕೆ ಮರಳಿದ್ದರು. ನನಗಿನ್ನೂ ಶಾಕ್ನಿಂದ ಮರಳಲಾಗಲಿಲ್ಲ. ಏನೋ ಇನ್ಸೆಕ್ಯುರಿಟಿ ಕಾಡಲಾರಂಭಿಸಿತು. ಅದು ಆ ಹುಡುಗಿಯ ಬಗ್ಗೆ ಮರುಕವೋ, ಆ ಸ್ಥಿತಿ ನನಗೆ ಬಂದರೆ ಎಂಬ ಭಯವೋ ತಿಳಿಯದು. ಒಂದಷ್ಟು ಹೊತ್ತು ತೀವ್ರವಾಗಿ ಕಾಡಿತು, ಚೇತರಿಸಿಕೊಳ್ಳಲೆಂದು ಹಾಡು ಕೇಳಲು ಆರಂಭಿಸಿದೆ. ಆದರೆ ಆ ಕ್ಷಣ ನನ್ನ ಅತ್ಯಂತ ಪ್ರಿಯವಾದ ಹಾಡುಗಳೂ ರುಚಿಸಲಿಲ್ಲ. ಈ ಹಾಡುಗಳಿಗೆಲ್ಲ ಅರ್ಥವೇ ಇಲ್ಲವೆನಿಸಿತು. ಜೀವನ, ಉಸಿರಾಟ, ನಾನು, ಈ ಜನ, ಬಸ್ಸು, ಜಗತ್ತು ಎಲ್ಲವೂ ಒಂದು ದಿನ ಆ ಹುಡುಗಿಯಂತೆಯೇ ನಶಿಸಿಹೋಗಬೇಕಲ್ಲವೇ?

ಈ ಯೋಚನೆಯಲ್ಲಿ ಮುಳುಗಿದ್ದ ನನಗೆ ಪಕ್ಕದ ಸೀಟಿನ ಹುಡುಗಿ ಎದ್ದಾಗ ಎಚ್ಚರಿಕೆಯಾಯಿತು. ಇನ್ನೇನು ನನ್ನ ಸ್ಟಾಪ್ ಹತ್ತಿರ ಬಂದಿತ್ತು. ಭಯಸ್ಮಿತಳಾದ ನಾನು ಒಂದು ನಿಟ್ಟುಸಿರಿನೊಂದಿಗೆ ಎದ್ದು ಬಸ್ಸಿಳಿದು, ಮನೆಯ ಹಾದಿ ಹಿಡಿದೆ. ಮನಸ್ಸಿನ ತುಂಬಾ ಪ್ರಶ್ನೆಗಳು. ಈ ಗೊಂದಲದ ನಡುವೆಯೇ ಮನೆ ತಲುಪಿದೆ. ನನ್ನ ಕಂಡ ತಕ್ಷಣ ಓಡಿ ಬಂದು ಕೈ ನೆಕ್ಕಿದ ನನ್ನ ನಾಯಿಮರಿ, ಬಾಗಿಲು ತೆರೆದು ನನ್ನ ನೋಡಿ ನಗೆ ಬೀರಿದ ಅಮ್ಮ, ಕೋಣೆಯಿಂದಲೇ ನನ್ನ ನೋಡಿ 'ಏನಮ್ಮ..ಬಂದೆಯಾ' ಎಂದ ಅಪ್ಪ, ಇವರನ್ನೆಲ್ಲಾ ನೋಡಿ ಮತ್ತೆ ಆ ಹುಡುಗಿಯ ನೆನಪಾಗಿ ಕಣ್ಣು ತೇವಗೊಂಡವು.

8 comments:

Anonymous said...

As again

Hudgi tumba chennagi bardidya!!!

neenu enu antha arthane agallamma. Abbah!

Somz!

kanasu said...

hmmmm! nijavaagi? well..thanks dear..

ತೇಜಸ್ವಿನಿ ಹೆಗಡೆ- said...

ನಿಜ.. ಬದುಕು ಕ್ಷಣಿಕ.. ಕ್ಷಣದೊಳಗೆ ಜೀವ ಇಲ್ಲದಂತಾಗಬಹುದು. ಸಾವು ಸಕಾಲದಲ್ಲಿ ಬಂದರೆ ಅಷ್ಟು ನೋವಾಗದು. ಆದರೆ ಅಕಾಲದಲ್ಲಿ ಬಂದರೆ ಬದುಕಿರುವವರು ಸಾಯುವವರೆಗೂ ಕಾಡುವುದು! ಮನಮುಟ್ಟಿತು ನಿಮ್ಮ ಬರಹ.

kanasu said...

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ತೇಜಸ್ವಿನಿಯವರೇ..

ಶರಶ್ಚಂದ್ರ ಕಲ್ಮನೆ said...

ತುಂಬಾ ಚನ್ನಾಗಿ ಬರೆದಿದ್ದೀರ. ಬದುಕು ಕ್ಷಣಿಕ ನಿಜ. ಕೆಲವೊಮ್ಮೆ ಇಂತ ಘಟನೆಗಳನ್ನು ನೋಡಿದಾಗ, ಅಸೆ ಆಕಾಂಕ್ಷೆ, ನಿರೀಕ್ಷೆಗಳೆಲ್ಲ ಅನರ್ಥವೆನ್ನಿಸುತ್ತದೆ. ಆದರೆ ಆಶಾವಾದವನ್ನು ಬಿಡಲಾಗದೆ ಜೀವನವನ್ನು ಮುಂದುವರೆಸಲೇಬೇಕು.

sampath said...

hey, entha baravanige aha... adbhoota.., nodalu samanya baravanige yanthe kanisidaru adralli, jeevanada kshanikathe yannu bimbisuva dristi ide, balina nashwarathe kshanikathe gothiddu, baligagi horadabekide, badkiruva thanaka nemmadiyinda badukannu bala bekide, ee badukina avadiyalle namma jothe balida namma balige neralannu kotta, neerereda, sihiyannu unisida yellarigu namma kayyalada sahayavanu madabekide..... navu sattha melu 10 janaru nenapisi kolluvanta kelasa galanu madabekide, jeevana kshanika vadaru navu madida olleya kelsagalu shashwatha...........

Jagali bhaagavata ಜಗಲಿ ಭಾಗವತ said...

Touching. Thanks.

kanasu said...

thank you bhaagavatare..