Friday, October 8, 2010

ಕಾನ್ಫೆರೆನ್ಸ್ ರೂಂನಲ್ಲಿ ಗಾಂಧೀ...



ಅಂದು ನಮ್ಮ ಆಫೀಸ್ ಹಾಗೂ ನನ್ನ ವೃತ್ತಿ ಜೀವನದ ಒಂದು 'ಮುಖ್ಯ' ದಿನ. ನಮ್ಮ ಮಧ್ಯಮ ಪ್ರಮಾಣದ ಭಾರತೀಯ ಕಂಪೆನಿಯು ಒಂದು ಪ್ರಖ್ಯಾತ ವಿದೇಶೀ ಶೈಕ್ಷಣಿಕ ಕಂಪನಿಯೊಂದಿಗೆ ಕೈಕುಲುಕಿತ್ತು. ಎರಡೂ ಕಂಪನಿಗಳೂ ಸೇರಿ ವಿಧ್ಯಾಭ್ಯಾಸದ ಒಂದು ಹೊಸ ಆಯಾಮವನ್ನು ಸೃಷ್ಟಿಸಲು ಮುಂದಾಗಿತ್ತು ಮತ್ತು ಇದರಲ್ಲಿ ನನ್ನ ಪಾತ್ರವೂ ಒಂದಷ್ಟಿದೆ ಎಂಬುದರ ಬಗ್ಗೆ ನನಗೆ ಹೆಮ್ಮೆಯೂ ಇತ್ತು. ಇಂಗ್ಲೆಂಡಿನಿಂದ ಆ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಮುಂದಿನ ಹಂತಗಳ ಕುರಿತು ಚರ್ಚಿಸಲು ಒಂದು ವಿಶೇಷ ಟೀಮ್ ಅನ್ನು ರಚಿಸಿ ತರಬೇತಿ ನೀಡಲು ಸ್ವತಃ ಇಂಗ್ಲೆಂಡಿನಿಂದ ಓರ್ವ ಅನುಭವೀ ವ್ಯಕ್ತಿ ಬರಲಿದ್ದ. ಆತನನ್ನು ಭೇಟಿ ಮಡಿ ಇನ್ನಷ್ಟು ಹೊಸವಿಷಯಗಳನ್ನು ಅರಿಯುವ ಸಂತಸ, ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆ ಹೊರ ದೇಶೀ ಅತಿಥಿಯನ್ನು ಸ್ವಾಗತಿಸಲು ನಾವೆಲ್ಲಾ ಉತ್ಸುಕತೆಯಿಂದ ದಿನ ಪ್ರಾರಂಭಿಸಿದ್ದೆವು. ಲಿಫ್ಟಿನ ಬಾಗಿಲು ತೆರೆದಾಕ್ಷಣ ವಾಡಿಕೆಯಂತೆ ಹೂವಿನಿಂದ ಅಲಂಕೃತಗೊಂಡ ರಂಗೋಲಿ ಮತ್ತು ದೀಪ. ನಮ್ಮ ಆಫೀಸಿನ ಯಾವುದೇ ವಿದೇಶೀ ಅಥಿತಿಯರಿಗೆ ಇದೇ ರೀತಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಆತ್ಮೀಯ ಸ್ವಾಗತ.


ಸುಮಾರು ೧೦ ಘಂಟೆ ಮತ್ತು ಈತ ನೈಲ್ ಆನ್ ದಿ ಡಾಟ್ ಹಾಜರಿದ್ದ. ಕೆಂಪು ದೇಹದ, ಎತ್ತರದ ಮೈಕಟ್ಟು, ಸುಮಾರು ೬೦ ರ ಪ್ರಾಯ. ಔಪಚಾರಿಕ ಶೇಕ್ ಹ್ಯಾಂಡ್, ನಗು ಎರಡು ಮಾತಿನ ನಂತರ ಎಲ್ಲರೂ ತಮ್ಮ ಸ್ಥಳಗಳಲ್ಲಿ ಕುಳಿತರು. ಅಲ್ಲಿಂದಲೇ ಶುರುವಾಯಿತು ಈತನ ಮಾತು. ಡಾಕ್ಟರೇಟ್ ಪಡೆದಿರುವ ಈತ ಶೈಕ್ಷಣಿಕ ವಿಷಗಳಲ್ಲಿ ನಿಷ್ಣಾತ. ಎಲ್ಲರಿಗೂ ತನ್ನ ಬಗೆಗಿನ ವಿವರಣೆಯನ್ನು ನೀಡಲು ಪ್ರಾರಂಭಿಸಿದ, ಅತ್ಯಂತ ಅನುಭವವಿರುವ, ಜ್ಞಾನ ಪಡೆದಿರುವ ವ್ಯಕ್ತಿ ಎಂದು ಅವರ ಬಗೆಗಿನ ಗೌರವ ಇಮ್ಮಡಿಸಿತು.


ತರಬೇತಿಯಲ್ಲಿ ಮಗ್ನರಾದ ನಾವು ನಡುವೆ ಒಂದು ಸಣ್ಣ ವಿರಾಮವನ್ನು ಪಡೆದೆವು. ಆತನೊಂದಿಗಿನ ಚಹಾ ಸಮಯದ ಮಾತುಕತೆಯ ನಡುವೆ ಪ್ರಾರಂಭವಾದದ್ದು ಚೀನೀ ದೇಶದ 'ವಿಚಿತ್ರ' ಲಕ್ಷಣಗಳ ಕುರಿತ ಪಟ್ಟಿ. ಆತ ಒಂದು ಸಣ್ಣ ವಿಷಯವನ್ನು ರಸಭರಿತವಾಗಿ ಕಳೆಕಟ್ಟಿ ಹೇಳುವುದು, ಮತ್ತದಕನುವಾಗಿ ನಮ್ಮ ಟೀಮ್ ನ ಕೆಲವರು ತಾಳ ಹಾಕಿ ಮತ್ತಷ್ಟು ಮಾತನಾಡುವುದು. ಅರೆ! ಒಬ್ಬರ ಬೆನ್ನ ಹಿಂದೆ ಹೀಗೆ ಮಾತನಾಡುವುದು ತಪ್ಪಲ್ಲವೇ? ಈತ ಇಂಥ ಮೇಧಾವಿ, ಇವನಿಗೆ ಗೊತ್ತಿಲ್ಲವೇ? ಅದು ಇಂತಹ ಅಫಿಶಿಯಲ್ ಮೀಟ್ ನಲ್ಲಿ! ಎಂಬುದು ನನ್ನ ಪ್ರಶ್ನೆಯಾಗಿತ್ತು. ಸರಿಯಾಗಿ ತಿಳಿಯುವಷ್ಟರಲ್ಲಿ ತರಬೇತಿಯ ಸಮಯ ಮತ್ತೆ ಮೊದಲ್ಗೊಂಡಿತು. ನನ್ನ ಮನಸ್ಸಿನ್ನೂ ಆತ ಪದೇ ಪದೇ ಉದಾಹರಣೆಗಳೊಂದಿಗೆ ಚೀನಾವನ್ನು ಖಂಡಿಸುತ್ತಿದ್ದುದು, ವ್ಯಂಗ್ಯ ಮಾಡಿದ್ದು ಎಲ್ಲಾ ವಿಚಿತ್ರವಾಗಿ ತೋರುತ್ತಿತ್ತು. ಅವೆಲ್ಲ ನಿಜವೋ ಸುಳ್ಳೋ ಅನ್ನುವಷ್ಟು ವರ್ಣನೀಯ ಮತ್ತು ಕೆಲವು ಹೇಯಕರ!


ಈ ಬಾರಿ ಆತನ ಮಾತಿಗೆ ಸಿಲುಕಿದ್ದು ಅಮೇರಿಕ! ಅಂತಹ ಪ್ರಬಲ ದೇಶವು ಲವಲೇಶವೂ ತರುಮಿಲ್ಲವೆಂಬುದು ಈತನ ಅಭಿಪ್ರಾಯ. ಇವೆಲ್ಲ ಕನ್ವೆನ್ಶನಲ್ ಐಡಿಯೋಲೋಜಿ ಇರಬಹುದು ಎಂದು ಲೆಕ್ಕಿಸಿದೆ. ನಂತರ ಪ್ರಾರಂಭವಾದದ್ದು ಪಾಕಿಸ್ತಾನದ ಇದೇ ರೀತಿಯ 'ಗುಣಗಾನ'! ಛೆ! ಏನಿದು ಎನ್ನುವಷ್ಟರಲ್ಲೇ ಹೊಳೆದದ್ದು ಈತ ಒಬ್ಬ ರೇಸಿಸ್ಟ್ ಎಂದು. ಆತನಿಗೆ ಇಂಗ್ಲೆಂಡ್ ಹೊರತಾಗಿ ಉಳಿದೆಲ್ಲಾ, ಅದರಲ್ಲೂ ಏಷಿಯಾದ ಎಲ್ಲಾ ದೇಶಗಳೂ ತುಚ್ಚ ಮತ್ತು ನಿಕೃಷ್ಟ. ಅದೇ ಹಳೆ ಬ್ರಿಟಿಷ್ ಮೈಂಡ್ ಸೆಟ್.


ವಿಷಯ ಅತಿರೇಕಕ್ಕೆ ತಲುಪಿದ್ದು ಭಾರತದ ಬಗ್ಗೆ ಮಾತು ಪ್ರಾರಂಭವಾದಾಗ. ನಮ್ಮ ರಾಜಕಾರಣ, ಸಾರಿಗೆ ವ್ಯವಸ್ಥೆ, ಮಾಲಿನ್ಯ, ಡೆಮಾಕ್ರಸಿ, ಕೋಮುಗಲಭೆ ಇತ್ಯಾದಿ ಎಲ್ಲಾ ತರೇವಾರಿ ವಿಷಯಗಳ ಬಗೆಗಿನ ಆತನ ಕೊಂಕು ನುಡಿಗಳು! ಒಮ್ಮೆ ಆತ, "Why cant Indians follow rules like Europeans" ಎಂದು ಹೇಳಿ ಜೋರಾಗಿ ನಗತೊಡಗಿದ. ಪೇಚಾದ ನನ್ನ ಮುಖ ಏನನೋ ಹೇಳಲು ಹೊರಟರೂ ಅದು ತೀಕ್ಷ್ಣವಾಗಿ ಇಲ್ಲದುದಕ್ಕೆ ನನ್ನನ್ನು ನಾನೇ ಶಪಿಸಿದೆ. ಇಷ್ಟೇ ಸಾಲದು ಎಂದು ನನ್ನ ಟೀಮ್ ನ ಜೊತೆಗಾರರು, ಇದಕ್ಕೂ ಅವರೊಡನೆ ಸೇರಿ ನಮ್ಮ ದೇಶದ ವಿರುದ್ಧವೇ ಮಾತನಾಡುತ್ತಿದ್ದಾರೆ! ಅರೆಕ್ಷಣ 'ಇಲ್ಲೆನಾಗುತ್ತಿದೆ' ಎಂಬ ಪರಿಜ್ಞಾನವೇ ಇಲ್ಲದಾಯಿತು.


ಅವರ ಕೆಲಸ ನಡೆಯಲು ಜನ ಎಷ್ಟರ ಮಟ್ಟಿಗಾದರೂ ಇಳಿದು ಹೋಗುತ್ತಾರೆಯೇ ಅನಿಸಿತು. ಆತ ಈ ಜನರೊಂದಿಗೆ ಭಾರತದ ಬಗೆಗಿನ ಕೊಂಕಿನ ಲೇವಡಿಗಳನ್ನು ಮಾಡುತ್ತಾ ಅದಕ್ಕಿವರು ನಗುತ್ತಿರುವಾಗ, ಇವರು ತಮ್ಮ ಸ್ವ ಗೌರವಕ್ಕೆ ಧಕ್ಕೆ ತರುವುದು ಕಂಡು ಆತ ನಗುತ್ತಿದ್ದಾನೆ ಎಂಬ ಸತ್ಯ ಅರಿಯದೆ ಹೋದರೆ! ಅಥವಾ ಅರಿತರೂ ಅದು ತಮ್ಮ ಕೆಲಸದ ಮುಂದೆ ಏನೂ ಅಲ್ಲ ಎಂಬ ನಿರ್ವಿಣ್ಣತೆಯೇ! ಎಂಬ ಭಾವನೆ ಮೂಡಿತು. ಆ ಹೊರದೇಶದ ವ್ಯಕ್ತಿಗಿಂತ ನಮ್ಮ ಟೀಮ್ ನ ಜನರ ಮೇಲೆ ಹೆಚ್ಚು ತಿರಸ್ಕಾರ ಹುಟ್ಟಿತು. ನಮ್ಮ ದೇಶಕ್ಕೆ ಬಂದು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಆತನಿಗೆ ನೀನೆ ಸರಿ, ನೀನೆ ರಾಜ ಎಂದು ತಲೆಯ ಮೇಲೆ ಹೊರುವುದೇ!?


ಆತ ಇಷ್ಟು ಸ್ವತಂತ್ರವಾಗಿ ನಮ್ಮ ಬಗ್ಗೆ ಮಾತನಾಡಲು ಅಧಿಕಾರ ಪಡೆಯಲು, ನಾವು ಗುಲಾಮರಂತೆ ತಲೆಯಾಡಿಸಲು ಕಾರಣವೇನು?! ಎಲ್ಲ ಕಂಪನಿಗಳ ಪರಿಸ್ಥಿತಿ ಹೀಗೇನೆ?! ನಮ್ಮ ನಾಯಕರು ಅವರ ಸ್ವಾರ್ಥಪರತೆಯಲ್ಲಿ ಮತ್ತು ಜನರು ಅವರದ್ದೇ ಇನ್ನಷ್ಟು ಸ್ವಾರ್ಥದಲ್ಲಿ ಮುಳುಗಿದುದರ ಕೊಡುಗೆಯಿರಬೇಕು, ನಮ್ಮ ಸ್ವಂತಿಕೆಯ ಬಗೆಗೆ ಯಾರಿಗೂ ಕಾಳಜಿಯಿಲ್ಲ, ಇಷ್ಟೆಲ್ಲಾ ಹೇಳುತ್ತಿರುವ ನನ್ನನ್ನೂ ಸೇರಿಸಿ! ಇವೆಲ್ಲ ಅನಿವಾರ್ಯವೆನ್ನುವಷ್ಟು ಬೆಳವಣಿಗೆ!


ನನ್ನ ತಲೆಯೊಂದಿಗೆ ಈ ಭೂಮಿಯೂ ತಿರುಗ ಹತ್ತಿದೆ ಎನಿಸಿತು. ಆದರೆ ಈಗ ಹಿಂದಕ್ಕೆ, ಚರಿತ್ರೆಯೆಡೆಗೆ ತಿರುಗುತ್ತಿದೆಯೇ? ಮತ್ತೆ ಬ್ರಿಟಿಷ್ ಛಾಯೆಯತ್ತ! ನಮ್ಮೆಲ್ಲರ ಈ ಅನಿವಾರ್ಯ ಬೆಳವಣಿಗೆಗಳು ಏನನ್ನು ಪರಿಚಯಿಸಬಹುದು? ಜಾಗತೀಕರಣದ ಭವಿಷ್ಯ ಮತ್ತೊಂದು ಈಸ್ಟ್ ಇಂಡಿಯಾ ಕಂಪನಿ?!.....ಕಾನ್ಫೆರನ್ಸ್ ರೂಂನ ಮೂಲೆಯ ಕುರ್ಚಿಯಲ್ಲಿ ಗಾಂಧೀಜಿ ಮೌನವಾಗಿ ಕುಳಿತಿದ್ದರು!

5 comments:

sunaath said...

ಕನಸು,
ನೀವು ಬರೆದ ಘಟನೆಯನ್ನು ಓದಿ ನನಗೂ ಸಹ ವ್ಯಥೆಯನಿಸಿತು. ನಮ್ಮ ಪ್ರಧಾನಿ ಮನಮೋಹನ ಸಿಂಗರೇ ಬ್ರಿಟನ್ನಿನಲ್ಲಿ, ಭಾರತಕ್ಕೆ ಬ್ರಿಟಿಶ್ ಆಡಳಿತದಿಂದ ಒಳ್ಳೆಯದೇ ಆಗಿದೆ ಎಂದು ಚಮಚಾಗಿರಿ ಮಾಡಿ ಬಂದಾಗ, ಉಳಿದ ವ್ಯಾಪಾರಿ ಜನರ ಬಗೆಗೆ ಏನು ಹೇಳುವದು?

pradeep said...

ಅಗಾಧ ಭಾರತೀಯ ಮನಸುಗಳನ್ನು ವಿಮರ್ಶಿಸುವುದೇ ಒಂದು ಚೋದ್ಯ
ಸಮುದ್ರದ ನೀರನ್ನು ಹಿಡಿ ಬೊಗಸೆಯಲ್ಲಿ ತುಂಬಲು ಹೇಗೆ ಸಾಧ್ಯ

ಭಾಶೇ said...

Absolutely ‘no comments’!

Have become speechless by the attitude shown. Are we never going to get rid of slave attitude???

Nice write up!

Venkatesha Murthy said...

hmm... nija swambhimanakke dhakke baro ella sandarbhagaloo mai ursutve. haage namma nissahaayakate bagge kooda vyathe pado sannivesha adu.

kelavu sali antha jaaga khaali madode olledu. adanella keltha/nodtha kootirodara badlu Vidura hege nissahaayakathe'yinda asthinavathi sabhe matte kurukshetra'dinda horage bandno haage madode sari.. illa andre Bhishma'na balavanta baagi bhaagi aagi amele bejar madko bekaagutte.

nanna abhipraaya ene irli, article bhaari chennagide.. as usual tumba detail aagi bardiddeera..

ತೇಜಸ್ವಿನಿ ಹೆಗಡೆ said...

ಇದು ವಾಸ್ತವಿಕ. ಆತನ ಮಾತೊಳಗಿನ ವ್ಯಂಗ್ಯ ಅಲ್ಲಿರುವವರ ಮನಸನ್ನು ಚುಚ್ಚಲೇ ಇಲ್ಲವೆಂದಾಯಿತು. ಹ್ಮ್ಂ.... ಉದರ ನಿಮಿತ್ತಂ ಬಹು ಕೃತ ವೇಶಂ. ಎಲ್ಲರೂ ಮಾಡೋದು ಅವರವರ ಸ್ವಾರ್ಥಕ್ಕಾಗಿ. ಕೊನೆಗೆ ತನಗಾಗಿ ಹೆತ್ತವರನ್ನೂ ತ್ಯಾಗ ಮಾಡೋರೇ ಹೆಚ್ಚಾಗಿರೋವಾಗ ದೇಶವೇನು ಇಂಥವರಿಗೆ?!! :(

ಮನಸನ್ನು ತಟ್ಟಿದ ಬರಹ.