Friday, May 25, 2012

ಸಣ್ಣ ದೀಪದ ರಸ್ತೆ


ಇನ್ನೇನು ಮಲಗುವ ಹೊತ್ತು
ಕಿಟಕಿಯಿಂದ ಕಂಡದ್ದು
ತಂಪಾದ ಗಾಳಿ, ನೀರವ ಮೌನ ಹಾಗೂ
ಅಗಲವಾದ, ಬರಿದಾದ ಆ ಸಣ್ಣ ದೀಪದ ರಸ್ತೆ!

ಅಂತಹ ಮನೋಹರ ನೋಟವಲ್ಲ ಬಿಡಿ
ಒಂದಷ್ಟು ಸೈಡ್ ಸ್ಟ್ಯಾಂಡ್ ಹಾಕಿದ ಗಾಡಿಗಳು!
ಕಾಗದ-ಎಲೆ ಚೂರುಗಳು, ಪ್ಲಾಸ್ಟಿಕ್ಕು ಕವರ್ ಗಳು
ಆದರೂ ನನ್ನನ್ನು ಆ ರಸ್ತೆ ಬಹಳ ಹೊತ್ತು ಆಕರ್ಷಿಸಿತ್ತು!


ಎಂತಹ ನಿರ್ಭಿಡತೆಯಿಂದ ಹರಿದಾಡಿದೆ! ಕಣ್ಣು ಹರಿದಷ್ಟು ದೂರ!
ಈ ದೈತ್ಯ, ಎಷ್ಟೆಲ್ಲಾ ಅನುಭವಗಳಿಗೆ ಮೂಕ ಸಾಕ್ಷಿ ಇರಬಹುದು!
ಎಂತೆಲ್ಲ ವಿಧದ ಭಾರಗಳನ್ನು ಹೊತ್ತಿರಬಹುದು!
ಇದಕ್ಕೆ ಜೀವವೇ ಬಂದರೆ ಎಷ್ಟೆಲ್ಲಾ ಕಥೆ ಹೇಳಬಹುದು!


ನೂರಾರು ತಲೆಗಳು, ಸಾವಿರಾರು ಆಲೋಚನೆಗಳು
ಸಂಕಷ್ಟಗಳ ಹೊತ್ತ ತರಕಾರಿ ಗಾಡಿಗಳು
ಚಪ್ಪಲಿ ಇಲ್ಲದ ಬರಿಗಾಲುಗಳ ಎಳೆತಗಳು
ನಡೆಯಲಾರದೆ ನಡೆದು ಸವೆವ ಮೂರು ಕಾಲುಗಳು


ರಸ್ತೆಗೆ ಕಲ್ಲೆಸೆವ ತುಂಟ ಹುಡುಗಿಯ ನಗೆ
ಕದ್ದು ಮುಚ್ಚಿ ಮರೆಯಲ್ಲಿ ಮೆರೆಯುವ ಸ್ಕೂಟಿ-ಬೈಕುಗಳು
ಸೆಲ್ ಫೋನ್ ಗಳ ಲೆಕ್ಕವಿಲ್ಲದ ಸಲ್ಲಾಪಗಳು
ನಿಲುಕಿಗೂ ಮೀರಿದ ಸ್ವಾರ್ಥಗಳು, ಸ್ವ-ಅರ್ಥಗಳು, ಕಲಹಗಳು


ಗ್ರಾಮ ಸಿಂಹಗಳ ಅತಿಕ್ರಮಣ ಘರ್ಜನೆಗಳು
ಕಾರ್ಪೋರೇಶನ್ ಕೃಪೆಯಿಂದ ಶುದ್ಧಿಗೊಂಡರೂ
ಸಹೃದಯರ ದಯೆಯಿಂದ ಮಹಡಿಯಿಂದ ಸುರಿವ ಕಸ ಕೊಳೆಗಳು
ಪ್ರತಿಷ್ಠೆ ನಿಭಾಯಿಸುವ ಚಿಕ್ಕ-ದೊಡ್ಡ ಪೆಂಡಾಲ್ ಗಳು

ಈ ಎಲ್ಲಾ ರೋಮಾಂಚಕಾರೀ ಘಟನೆಗಳಿಗೆ,
ದೈನಂದಿನ ಬದುಕುಗಳಿಗೆ, ಬವಣೆಗಳಿಗೆ ಮೌನ ಸಾಕ್ಷಿ;
ಒರಟಾದ, ಮೌನವಾದ, ನಿಶ್ಚಲವಾದ
ಆ ಸಣ್ಣ ದೀಪದ ರಸ್ತೆ!

ನಿಟ್ಟುಸಿರು ಬಿಡುತ್ತಾ ನಕ್ಕೆ!
ನನ್ನ ವಿಯರ್ಡ್ ಥಾಟ್ಸ್ ಗಳನ್ನು ನೆನೆದು!
ರಸ್ತೆಯನ್ನು ಮತ್ತೊಮ್ಮೆ ಕಂಡು
ಥ್ರಿಲ್ ಆಗಿ, ಮಲಗಿದೆ!

1 comment:

sunaath said...

ಭಾವೋದ್ದೀಪನಕ್ಕೆ ಸಣ್ಣ ದೀಪವೇ ಪ್ರಶಸ್ತವೇನೊ!