Sunday, May 9, 2010

ಯಾಂತ್ರಿಕ ಬದುಕಿಗೆ ಬ್ರೇಕ್ ಹಾಕುವ ವೈಭವ - ಈ ಪ್ರವಾಸದ ಅನುಭವ (ಭಾಗ - 2)

(ಭಾಗ 1 ರಿಂದ ಮುಂದುವರಿಕೆ...)


ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯೋ!


ಆಗುಂಬೆಯಲ್ಲೇ ಉಳಿಯುವ ಪ್ಲಾನ್ ಇದ್ದ ನಾವು ಗುಂಡನ ಸಲಹೆಯಂತೆ ಶೃಂಗೇರಿಯತ್ತ ಹೊರಟೆವು. ನಡುವೆ ಚೆಕ್ ಪೋಸ್ಟ್ನಲ್ಲಿ ಯಾರೋ ಇನ್ಸ್ ಪೆಕ್ಟರ್ ನ ವಿಚಾರಣೆಯಿಂದ ನಮ್ಮ ಗುಂಡನ ಮೂರನೇ ಹೆಸರು ಪರಿಚಯವಾಯಿತು, 'ಬಾಬು' ಎಂದು. ಬಹುಷಃ ತನ್ನ ಮುಸಲ್ಮಾನ ಹೆಸರನ್ನು ಹೇಳಿದರೆ ತೊಂದರೆಯಾಗಬಹುದೇನೋ ಎಂಬ ಕಾರಣಕ್ಕೆ ತನ್ನ ನಿಜನಾಮ ಕೇಳಲಿಲ್ಲವೇ ಎಂಬ ಅನುಮಾನ ಬಂತು. ತನ್ನ ಹೆಸರು ಮರೆ ಮಾಚುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಈ ಹಿಂದೂ - ಮುಸಲ್ಮಾನ್ ಭೇದದಿಂದಲ್ಲವೇ ಎನಿಸಿತು. ಆಗಷ್ಟೇ ಅನುಭವಿಸಿದ್ದ ಪ್ರಕೃತಿಯ ಹಿರಿತನ ಮತ್ತು ಈ ಮನುಷ್ಯನ ಕಾಂಪ್ಲೆಕ್ಸಿಟೀಸ್ ನ ಕನಿಷ್ಟತೆ ಎರಡೂ ಜಕ್ಷ್ಟಪೋಸ್ ಆಗಿ ಕಾಣುತ್ತಿತ್ತು. ಅಷ್ಟರಲ್ಲೇ ಬಂದಿತ್ತು ಶೃಂಗೇರಿ ತೀರ್ಥ. ಅಲ್ಲೇ ಒಂದು ಕಾಟೇಜ್ ರೂಂ ಬುಕ್ ಮಾಡಿ ನಿರಾಳವಾಗಿ ದೇವಸ್ಥಾನದಲ್ಲೇ ಊಟ ಮುಗಿಸಿ ರೂಮಿಗೆ ಮರಳಿ ಮಲಗಿದ್ದಷ್ಟೇ ಗೊತ್ತು, ಬೆಳಕು ಹರಿದಿತ್ತು. ಲಘುಬಗೆಯಿಂದ ಸಿದ್ಧರಾಗಿ, ಶಾರದಾದೇವಿ ಮತ್ತು ಆದಿ ಶಂಕರರ ದೇವಸ್ಥಾನಕ್ಕೆ ಹೊರಟೆವು. ಶೃಂಗೇರಿಯ ಆ ಪ್ರಾಚೀನ ದೇವಸ್ಥಾನ ನಯನ ಮನೋಹರವಾಗಿತ್ತು. ಮುಂಜಾನೆಯ ತುಂತುರಿನಲ್ಲಿ ತೊಯ್ದ ಆ ಆಲಯ ಮತ್ತಷ್ಟು ತಾಜಾತನದಿಂದ ತುಂಬಿತ್ತು. ಕಂಡೊಡನೆಯೇ 'ಶಿಲೆಯಲ್ಲ ವೀ ಗುಡಿಯು ಕಲೆಯ ಬಲೆಯು' ಎಂಬ ಕವಿವಾಣಿಯು ನೆನಪಾಯಿತು.

ಹೊಯ್ಸಳ ಶೈಲಿಯ ಆ ದೇವಸ್ಥಾನ ನಕ್ಷತ್ರಾಕಾರದಿಂದ ರಚಿತವಾಗಿತ್ತು. ಆರ್ಕಿಟೆಕ್ಚರ್ ನ ಅಭ್ಯಸಿಸುತ್ತಿರುವ ನನ್ನ ತಂಗಿಯ ಮೂಲಕ ಕಟ್ಟಡದ ರಚನೆಯ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಿತು. ನಂತರ ಕಟ್ಟಡದ ಸುತ್ತಲೂ ಜೀವಂತಿಸಲ್ಪಟ್ಟ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದೆವು. ಒಂದೊಂದು ಶಿಲ್ಪ ಒಂದೊಂದು ಕಥೆ ಹೇಳುತ್ತಿತ್ತು. ಯುದ್ಧ, ಆನಂದ, ಸಂಗೀತ, ಅವತಾರಗಳು, ನೃತ್ಯ ಇತ್ಯಾದಿ ಇತ್ಯಾದಿ. ಬಹುಷಃ ಅದರ ಡೀಟೈಲ್ಸ್ ಸ್ಟಡಿ ಮಾಡಿದರೆ ಒಂದು ಚರಿತ್ರೆಯ ಸಮಗ್ರ ಕಥೆಯೇ ತಿಳಿಯಬಹುದೇನೋ ಎನಿಸಿತ್ತು. ಮೈ ನವಿರೇಳಿಸುವಂತಹ ಆ ಶಿಲ್ಪಗಳು ಅದನ್ನು ಕೆತ್ತಲ್ಪಟ್ಟ ಕಲಾವಿದರ ಸಂಯಮ, ಕೌಶಲ್ಯತೆಗೆ ಮೂಕ ಸಾಕ್ಷಿಯಾಗಿತ್ತು. ಅದನ್ನೇ ನೋಡುತ್ತಾ ನನ್ನ ತಂಗಿ ಅದರ ಬಿಂಬವನ್ನೂ ಬಿಡಿಸಿದ್ದಳು. ಆ ದೇವಸ್ಥಾನದಲ್ಲಿ ಮೈನಸ್ ಪಾಯಿಂಟ್ ಆದದ್ದು ಎಂದರೆ, ಆ ಜನ ಜಂಗುಳಿ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಗುಂಪುಗುಂಪಾಗಿ ಜಮಾಯಿಸತೊಡಗಿತು. ಸಾಕಷ್ಟು ಭಕ್ತರು, ತೋರಿಕೆಯ ಭಕ್ತರು ಮತ್ತಷ್ಟು ಪ್ರವಾಸಿ ಹುರುಪಿನಿಂದ ಬಂದವರು ಇನ್ನಷ್ಟು. ಒಟ್ಟಿನಲ್ಲಿ ಅವರೆಲ್ಲರೊಟ್ಟಿಗೆ ನಾವೂ ಸಾಕಷ್ಟು ಸಮಯ ದೇವಸ್ಥಾನದಲ್ಲಿ ಕಳೆದು, ನಮ್ಮ ಪ್ರಯಾಣ ಮುಂದುವರೆಸಿದೆವು.


ಸಿರಿಮನೆಯ ಸೊಬಗು


ಶೃಂಗೇರಿಯ ರುಚಿಯನ್ನು ಸವಿದ ನಂತರ ನಮ್ಮ ಮುಂದಿನ ಪ್ರಯಾಣ ಸಿರಿಮನೆ (ಕಿಗ್ಗ) ಜಲಪಾತದೆಡೆಗೆ. ಹಸಿರು ಕಾಡಿನ ನಡುವೆ ಬಿಳಿವಾಲಿನಂತಿರುವ ಆ ಜಲಪಾತಗಳು, ಝರಿ ತೊರೆಗಳು ನನಗೆ ಅತ್ಯಂತ ಪ್ರಿಯವಾದ ಸ್ಥಳ. ಅದೇ ಭಾವಾವೇಶದಿಂದಲೇ ಉತ್ಸುಕಳಾಗಿ ಮುನ್ನಡೆದೆ. ಶೃಂಗೇರಿ ಇಂದ 20 ಕಿ ಮೀ ದೂರದಲ್ಲಿರುವ ಸಿರಿಮನೆಯ ದಾರಿಯೂ ಅಷ್ಟೇ ಸೊಗಸಾಗಿತ್ತು. ಜಲಪಾತದ ಹತ್ತಿರ ಪಾದಸ್ಪರ್ಶ ಮಾಡಿದ ಕೂಡಲೇ ಝರಿಯ ಮೊರೆತ ಕೇಳಿ ಪುಳಕಗೊಂಡೆ. ಬೇಸಿಗೆಯಾದ್ದರಿಂದ ಎಂದಿನಂತೆ ಝರಿ ತುಂಬಿ ಹರಿಯದಿದ್ದರೂ, ಸಾಕಷ್ಟು ರಭಸದಿಂದ ಝೇಂಕರಿಸುತ್ತಿತ್ತು. ನೀರು ಮೊಳಕಾಲ್ಮುಳುಗುವಷ್ಟು ಇಳಿದೆವು. ಅಲ್ಲೇ ನಮ್ಮಂತೆ ನೀರಾಟವಾಡುತ್ತಿದ್ದ ದೊಡ್ಡ ಹೆಂಗಸೊಬ್ಬರು ಹಿಂಜರಿಯುತ್ತಿದ್ದ ನಮ್ಮನ್ನು ಕಂಡು "ಬಾಮ್ಮಾ, ಇಂತಾ ಅನುಭವ ಮತ್ತೆ ಸಿಗದು. ಸಿಕ್ಕಾಗ ಎಂಜಾಯ್ ಮಾಡಬೇಕು" ಎಂದು ತಮ್ಮ ಸ್ನೇಹ ಹಸ್ತ ಚಾಚಿದರು. ಆ ನೀರಿನಲ್ಲಿಳಿದು ಎಲ್ಲ ಹಿಂಜರಿಕೆ ತೊರೆದು ಚೆನ್ನಾಗಿ ನೆನೆದು ಝರಿಯನ್ನನುಭವಿಸಿದೆವು. ಅಲ್ಲಿ ನೆರೆದಿದ್ದ ಜನರಿಗೂ ನಮಗೂ ಯಾವ ನಂಟಸ್ತಿಕೆಯಿಲ್ಲದಿದ್ದರೂ ಈ ಪ್ರಕೃತಿಯ ಮಡಿಲಲ್ಲಿ ನಾವೆಲ್ಲರೂ ಒಂದೇ ಆಗಿದ್ದೆವು. ಎಲ್ಲರೂ ಅವರ ಎಲ್ಲ ಟೆನ್ಶನ್, ಸ್ಟೇಟಸ್ ಬಿಟ್ಟು ಆ ಕ್ಷಣಕ್ಕೆ ಕಾಡಿನ ಮಕ್ಕಳಾಗಿದ್ದರು. ಸಮಯದರಿವೆಯೇ ಆಗಲಿಲ್ಲ!




ಸಾಹಿತ್ಯ - ಸಂಸ್ಕೃತಿಯ ಕೇತನ - ಕುಪ್ಪಳಿ


ಎಲ್ಲವೂ ಮುಗಿದಿತ್ತು. ಕೊನೆಗೆ ಉಳಿದಿತ್ತು ನಮ್ಮ ಕೇಂದ್ರೀಕೃತ, ಟ್ರಿಪ್ಪೋದ್ದೇಶೀ ಸ್ಥಳ ಕುಪ್ಪಳಿ. ಕುವೆಂಪುರವರ ನಿವಾಸ. ನೀರಾಟದಿಂದ ದಣಿದಿದ್ದರೂ, ಈಗಿನ್ನು ತೆರಳುವ ಸ್ಥಳದ ಬಗೆಗೆ ಉತ್ಸುಕತೆ. ಅದೇ ಉತ್ಸಾಹಕ್ಕೆ ಮತ್ತಷ್ಟು ಜೀವ ತುಂಬುವಂತೆ ಚಿಕ್ಕಮಗಳೂರಿನ ಕಾಡ ಸೌಂದರ್ಯ ಸಿರಿ. ಅದೇ ಕಾಡ ರಸಹೀರಿ ಮುಂದುವರೆಯುತ್ತಿದ್ದಾಗ ನಮಗೆ ಕಾಣಸಿಕ್ಕಿದ್ದು ಕುವೆಂಪುರವರ ತಾಯಿಯ ತವರೂರಾದ ಹಿರೇಕೊಡುಗೆ. ಅದೇ ಕುವೆಂಪುರವರ ಜನ್ಮ ಸ್ಥಳ. ಅವರ ಮನೆಯನ್ನು ಈಗ ಕುವೆಂಪು ಸಂದೇಶ ಭವನವನ್ನಾಗಿ ನಿರ್ಮಿಸಿದ್ದಾರೆ. ಕುವೆಂಪುರವರ ವಿಗ್ರಹ ಮೂರ್ತಿಯನ್ನು ಕೆತ್ತಿ ಸುತ್ತಲೂ ಅವರ ಬರಹಗಳನ್ನಿಳಿಸಿ ಅಲಂಕರಿಸಿದ್ದರು. ಖೇದವೆಂದರೆ ಆ ಸ್ಥಳ, ಪರಿಚಾರಕರು ಯಾರೂ ಇರದೇ ಅನಾಥವಾಗಿತ್ತು.

ಅಲ್ಲಿಂದ ಹೋರಾಟ ನಾವು, ಕುವೆಂಪುರವರ ಸ್ಪೂರ್ತಿಯ ಸೆಲೆಯೂ, ಅವರ ಸಮಾಧಿಯೂ ಆದ ಕವಿಶೈಲಕ್ಕೆ ಹೊರಟೆವು. ಅದೊಂದು ರೋಮಾಂಚಕಾರೀ ಸ್ಥಳ. ಆ ಸಮಾಧಿಯ ರಚನೆ, ಅದರ ಸುತ್ತಲೂ ಮೂಕ ಸ್ಥಂಬಗಳಂತೆ ನಿಂತ ಆ ಕಲ್ಗಂಬಗಳು ಕುವೆಂಪುರವರ ಘನತೆಗೆ ಸಾಕ್ಷೀಭೂತವಾಗಿತ್ತು. ಎಲ್ಲಿ ನೋಡಿದರೂ ಕುವೆಂಪುರವರ ನುಡಿಮುತ್ತುಗಳ ಕಲ್ಬರಹಗಳು, ನಳನಳಿಸುತ್ತಿದ್ದವು. ಅಲ್ಲಿ ಕಂಡ ಕುವೆಂಪುರವರ ಸ್ವಹಸ್ತಾಕ್ಷರ, ಅವರು ಧ್ಯಾನಿಸುತ್ತಿದ್ದ ಸ್ಥಳ, ಸುತ್ತಲಿನ ಪ್ರಕೃತಿ ನೋಟ, ಆ ವೈಭವೋಪೇತ ನಿಶ್ಯಬ್ಧತೆಗಳೆಲ್ಲವೂ ಕುವೆಂಪುರವರನ್ನು ಜೀವಂತ ಕಂಡಂತೆ ಅನುಭವ ತಂದಿತ್ತು.

ಕವಿಶೈಲದಿಂದ ಕುವೆಂಪುರವರ ಮನೆಗೆ ಕಾಲುದಾರಿಯಿದೆ. ಅದೇ ದಾರಿಯಲ್ಲೇ ಕುವೆಂಪುರವರು ಗಮಿಸುತ್ತಿದ್ದರಂತೆ. ಕಾಡಿನ ಮಧ್ಯದ ಆ ಕಾಲುದಾರಿಯಲ್ಲಿ ನಡೆದೇ ಹೋಗುವ ಹಂಬಲ ತೀವ್ರವಾಗಿದ್ದರೂ ಮಳೆರಾಯ ನಮ್ಮ ಸಾಥ್ ನೀಡಲಿಲ್ಲ. ಸರಿ, ಕಾರ್ನಲ್ಲೇ ಹೊರಟೆವು.

ಕಾರಿನಿಂದಿಳಿದ ಕೂಡಲೇ ಧುತ್ತೆಂದು ಪ್ರತ್ಯಕ್ಷವಾದದ್ದು ಮತ್ತೊಂದು ಅದ್ಭುತ, ವೈಭವಯುತ ಚರಿತ್ರೆ! ಇಡೀ ಕುಪ್ಪಳಿಗೆ ಇದ್ದದ್ದೇ ಒಂದೇ ಮನೆ. ಅದೇ ಕುವೆಂಪುರವರ ಮನೆ. 250 ವರ್ಷಗಳಷ್ಟು ಪ್ರಾಚೀನವಾದ ಹಾಳುಗೆಡವಿದ್ದ ಆ ಕಟ್ಟಡವನ್ನು ಮತ್ತೆ ಅದೇ ರಚನೆಯಲ್ಲೇ ಪುನರುಜ್ಜೀವನಗೊಳಿಸಿ ಜೀವಂತವಾಗಿಸಿದ್ದಾರೆ. ಮನೆ, ಮನೆಯಲ್ಲಿ ಉಪಯೋಗಿಸುತ್ತಿದ್ದ ಪಾತ್ರೆ, ಪರಡಿ, ಬಟ್ಟೆ, ಕೊಠಡಿಗಳು, ಬಾಣಂತಿ ಕೊಠಡಿ, ಕಣಜ ಇತ್ಯಾದಿಗಳಿಂದ ಆ ಕುಪ್ಪಳಿ ಮನೆಯವರ ಸಂಸ್ಕೃತಿಯನ್ನೇ ಮರು ಸೃಷ್ಟೀಕರಿಸಿರುವುದು ಅನುರಣನೀಯವಾಗಿತ್ತು. ಮತ್ತೊಂದು ಗಮನ ಸೆಳೆವ ಅಂಶವೆಂದರೆ, ಕುವೆಂಪುರವರು ಉಪಯೋಗಿಸುತ್ತಿದ್ದ ಬಟ್ಟೆಗಳು, ಲೇಖನಿ, ಕನ್ನಡಕ, ಶೇವಿಂಗ್ ರೆಜರ್ ಇತ್ಯಾದಿ. ಎಲ್ಲವೂ ಆಕರ್ಷಕವಾಗಿ, ದುಬಾರಿಯಾಗಿ ಇದ್ದುದು ಕುವೆಂಪುರವರ ಸೌಂದರ್ಯ ಪ್ರಜ್ಞೆ ಮತ್ತು ಆಸಕ್ತಿಗಳನ್ನು ಸಾರುತ್ತಿತ್ತು. ಅವರ ಪ್ರಶಸ್ತಿ, ಪುರಸ್ಕಾರಗಳಿಗಂತೂ ಲೆಕ್ಕವೇ ಇಲ್ಲ! ಅದರಲ್ಲಿ ಅತ್ಯಂತ ಗಮನ ಸೆಳೆದದ್ದು ಕರ್ನಾಟಕ ರತ್ನ ಪ್ರಶಸ್ತಿ. ಗಾತ್ರದಲ್ಲಿ ದೊಡ್ಡದಾದ, ಗಂಭೀರವಾದ ಆ ಶ್ರೇಷ್ಠ ಪ್ರಶಸ್ತಿಯ ನೋಟ ಮನಸೂರೆಗೊಂಡಿತ್ತು.

ಅವರ ಸಾಹಿತ್ಯ ಕೃಷಿಯ ಆಗರವೇ ಆದ ಆ ಮನೆಯ ಒಂದು ಕೊಠಡಿಯಲ್ಲಿ ಎಲ್ಲ ಕೃತಿಗಳನ್ನೂ, ರಚನೆಗಳನ್ನೂ ಪ್ರದರ್ಶಿಸಿದ್ದರು. ಅದರಲ್ಲಿ ಅತ್ಯಂತ ಗಮನ ಸೆಳೆದದ್ದು, ಅವರ ಸ್ವಹಸ್ತಾಕ್ಷರದ ಮುದ್ರೆಯಾದ 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯ. ಇವೆಲ್ಲವನ್ನೂ ವೀಕ್ಷಿಸಿ, ಕಣ್ತುಂಬಿ ಪುಳಕಗೊಂಡಿದ್ದ ನಾವು ಫೋಟೋಗ್ಯಾಲರಿ ಹೊಕ್ಕೆವು. ಕುವೆಂಪುರವರ ಫೋಟೋಗ್ಯಾಲರಿಯಂತೂ ನಮಗೆ ಮತ್ತೊಂದು ಇನ್ಫೋ ಟೈನ್ ಮೆಂಟ್ ಆಗಿತ್ತು. ಕುವೆಂಪುರವರು ಚಿಕ್ಕದಾಗಿದ್ದಂದಿನಿಂದ ಕೊನೆಯುಸಿರೆಳೆಯುವವರೆಗಿನ ಸಾಕಷ್ಟು ಫೋಟೋಗಳು ಅವರ ಜೀವನದ ಗತ ವೈಭವವನ್ನು ಸಾರುತ್ತಿತ್ತು.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ದಿ ಗ್ರೇಟ್ ಸೌಲ್ ಕುವೆಂಪುರವರು ಕಾಲವಾದ ಘಳಿಗೆ ರಾತ್ರಿ 1.00 ಘಂಟೆ. ಆದ್ದರಿಂದ ಅವರ ಮಗಳ ಸಲಹೆಯಂತೆ, ಕುವೆಂಪುರವರ ವಿಗ್ರಹದ ಹಿಂದೆ ಗಡಿಯಾರವಿರಿಸಿ ಅದರ ಸಮಯವನ್ನು ಒಂದು ಘಂಟೆಗೆ ನಿಲ್ಲಿಸಲಾಗಿದೆ. ಇದನ್ನು ಕಂಡ ನಮಗೆ ಒಂದು ಕ್ಷಣ ಉಸಿರುಗಟ್ಟಿತ್ತು. ಎಲ್ಲವನ್ನೂ ನಿಧಾನವಾಗಿ ಅರಗಿಸಿ ಅನುಭವಿಸುತ್ತಿದ್ದ ನಮಗೆ ಸಮಯ ಹೋದದ್ದೇ ತಿಳಿಯಲಿಲ್ಲ. ಒಂದೆರಡು ಪುಸ್ತಕಗಳನ್ನು ಕೊಂಡು, ನಂತರ ಮನೆಮುಂದಿದ್ದ ಕೃಷಿ ಕೊಠಡಿಗೆ ನಡೆದೆವು. ಅಲ್ಲಿ ಅವರು ಕೃಷಿಗೆಂದು ಉಪಯೋಗಿಸುತ್ತಿದ್ದ ಸಲಕರಣೆಗಳು ಮತ್ತದರ ನಾಮ ಫಲಕಗಳೂ ಇದ್ದವು. ಒಟ್ಟಾರೆ, ಆ ಮನೆ ಕುವೆಂಪುರವರ ಜೀವನ ಶೈಲಿಯ, ಅವರ ಪಾಂಡಿತ್ಯದ ಮತ್ತು ಅವರ ವ್ಯಕ್ತಿತ್ವದ ಒಂದು ಸಂಕೇತವಾಗಿತ್ತು. ಮನೆಯ ಮುಂದಿನ ಜಗುಲಿಯ ಮೇಲೆ ಕೂತು ಮತ್ತೊಂದಿಷ್ಟು ಪ್ರಕೃತಿಯ ಸ್ವಾದವನ್ನು ಆಸ್ವಾದಿಸಿ, ಆನಂದಿಸಿ ಹೊರಟೆವು. ಅಲ್ಲೇ ಮನೆಯ ಪಕ್ಕದ ಪುಟ್ಟ ಅಂಗಡಿಯಲ್ಲೇ ಖಾನಾವಳಿಯ ವ್ಯವಸ್ಥೆಯೂ ಆಯಿತು. ಕೊನೆಗೊಮ್ಮೆ ಮನೆಕಡೆ ತಿರುಗಿ ನೋಡಿ, ಕಾರು ಹತ್ತಿ ನಮ್ಮ ದಾರಿ ಹಿಡಿದೆವು.


ಕ್ಷೇಮವಾಗಿ, ಲಾಭವಾಗಿ....


ಕಾರು ಬೆಂಗಳೂರಿನತ್ತ ಮುಖಮಾಡಿತ್ತು. ಮನ ಕವಿಶೈಲವನ್ನೇ ಗುನುಗುತ್ತಿತ್ತು. ಮರಳಿ ಬೆಂಗಳೂರಿಗೆ ಹೋಗಲೇ ಬೇಕೇ? ಎನಿಸಿತ್ತು. ಅದೇ ಆಫೀಸ್, ಮನೆ, ಟ್ರಾಫಿಕ್, ಕಾಂಪಿಟೆಶನ್, ಡಿಪ್ಲೊಮಸಿ! ಛೆ ನಾವೂ ಈ ರೀತಿ ಹಳ್ಳಿಯಲ್ಲಿರಬಾರದಿತ್ತೆ ಎಂದೆನಿಸಿತ್ತು. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎಂಬ ಅಡಿಗರ ಸಾಲು ನೆನಪಾಗಿ ನಗು ಬಂದಿತ್ತು. ಹೊರಡುವುದು ಮರಳಿ ಮನೆಗೆ ಆದರೂ ಈ ಪ್ರವಾಸ ಒಂದು ಹೊಸ ಅನುಭವವನ್ನು ದಕ್ಕಿಸಿತ್ತು. ಆ ಕಾಡಿನ ಪ್ರಕೃತಿಯು ಮೆಟಫಿಸಿಕಲ್ ಟಚ್ ನ ಅನುಭೂತಿ ನೀಡಿತ್ತು. ಹೊಸ ಆಯಾಮಗಳ, ಹೊಸ ಹುರುಪುಗಳ ಲಾಭ ನಮ್ಮದಾಗಿತ್ತು.

ಪ್ರಯಾಣದಲ್ಲಿ (ಕಾರಲ್ಲಿ ಕೂತೆ!) ಸಾಕಷ್ಟು ದಣಿದ ನಾವು ಕಾರಲ್ಲೇ ಚೆನ್ನಾಗಿ ನಿದ್ರಿಸಿದ್ದೆವು. ಕನಸಿನಲ್ಲಿ ಮತ್ತೆ ಕವಿಶೈಲದ ಬಂಡೆಗಳು ಕನವರಿಸಿತ್ತು! ಅಪ್ಪ ಎಚ್ಚರಿಸಿದಾಗಲೇ ತಿಳಿದ್ದದ್ದು ನಾವು ಆಗಲೇ ಬೆಂಗಳೂರನ್ನು ತಲುಪಿದ್ದೆವೆಂದು. ಯಾವ ನಾಯಿಯನ್ನು ಕಂಡರೂ ನೆನಪಾಗುತ್ತಿದ್ದ ಚೂಟಿಯನ್ನು ಅಂತೂ ವಾಪಸ್ ಕರೆತಂದು ಮನೆ ಸೇರಿದ್ದವು. ಅದರ ಆನಂದಕ್ಕಂತೂ ಪಾರವೇ ಇಲ್ಲ! ಗುಂಡ ತನ್ನ ಪೇಮೆಂಟ್ ಪಡೆದು ನಮ್ಮೆಲ್ಲರಿಗೂ 'ಬೈ' ಮಾಡಿ ಹೊರಟಿದ್ದ.

ಅಂತೂ ಈ ಪುಟ್ಟ ಪ್ರವಾಸ ನಮ್ಮ ದಿನನಿತ್ಯದ ಯಾಂತ್ರಿಕ ಜೀವನಕ್ಕೆ ಒಂದು ಬ್ರೇಕ್ ಹಾಕಿದಂತಿತ್ತು!

ಯಾಂತ್ರಿಕ ಬದುಕಿಗೆ ಬ್ರೇಕ್ ಹಾಕುವ ವೈಭವ - ಈ ಪ್ರವಾಸದ ಅನುಭವ (ಭಾಗ - 1)



ಬ್ರೇಕ್ ಹಾಕುವ ಮೊದಲು


ಎಂದಿನಂತೆ ಸುಖಾಸುಮ್ಮನೆ ಆಫೀಸಿಗೆ ಹೊರಡಲು ಸಿದ್ಧಳಾಗುತ್ತಿದ್ದ ನನಗೆ ಶೇವ್ ಮಾಡುತ್ತಿದ್ದ ಅಪ್ಪ ರೇಜರ್ನನ್ನು ಬಟ್ಟಲಿಗೆ ಕೆಡವುತ್ತ ಹೇಳಿದ ಮಾತು ಕೇಳಿ ಕಿವಿ ನೆಟ್ಟಗಾಯಿತು. ಲಘುಬಗೆಯಿಂದ ಹೋಗಿ ಕೇಳಿದೆ. ಹೌದು ನಾನು ಸರಿಯಾಗೇ ಕೇಳಿದ್ದೆ. ಬಹುದಿನಗಳ ಆಲೋಚನೆಯಿಂದಲೋ ಅಥವಾ ಅಮ್ಮನ ಪೀಡಿಕೆಯಿಂದಲೋ ಅಪ್ಪ ನಮ್ಮೆಲ್ಲರೊಡನೆ ಒಂದು ವೀಕ್ ಎಂಡ್ ಟ್ರಿಪ್ ಹೊರಡಲು ಸಿದ್ಧರಾಗಿದ್ದರು. ಎಲ್ಲರಿಗೂ ಲವಲವಿಕೆ! ಇನ್ನು ಹೊರಡುವ ಮಾತು, ಬಹುಕಡಿಮೆ (ಅಂದರೆ ಒಂದು ದಿನದ) ಸಮಯದಲ್ಲಿ ಹೊರಡುವ ಸ್ಥಳ ನಿರ್ಧರಿಸಿ, ಪ್ರಯಾಣದ ಆಯ್ಕೆ ನಿರ್ಧರಿಸಿ, ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಮನೆಯ ಮುದ್ದಿನ ಕೂಸಾದ ಚೂಟಿ (ನಾಯಿಮರಿ) ಯ ಇರುವಿಕೆಗೆ ಒಂದು ವ್ಯವಸ್ತೆ ಮಾಡಬೇಕಿತ್ತು! ನಮ್ಮ ಇದೇ ಮಾತುಕತೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ ನಮ್ಮ ಮನೆ ಕೆಲಸದಾಕೆ ಮಂಗಳಮ್ಮ, ನೆಲ ಸಾರಿಸುತ್ತಾ "ನೀವು ಹೋಗಿ ಬನ್ರಿ, ಅದರ ಚಿಂತೆ ನಿಮಗ್ಯಾಕೆ, ನಾನ್ ನೋಡ್ಕೋತೀನಿ" ಎಂದರು. ಆ ಮಾತಿನಿಂದ, ನಮ್ಮ ಅರ್ಧ ಭಾರ ಕಡಿಮೆಯಾದಂತಾಯಿತು. ಹೇಗೋ ಏನೋ ಎಂಬ ಯೋಚನೆ ಬಂದರೂ, ಆಕೆಯ ನಡವಳಿಕೆ, ಜವಾಬ್ದಾರಿ ತಿಳಿದಿದ್ದ ನಾವೆಲ್ಲರೂ ಸಮಾಧಾನಗೊಂಡೆವು. ಮುದ್ದು ಮರಿಯನ್ನು ಅವರೊಡನೆ ಬಿಟ್ಟಿರಲು ಒಪ್ಪಿದೆವು.

ಇಷ್ಟರಲ್ಲೇ ಘಂಟೆ ಒಂಭತ್ತಾಗಿತ್ತು. ತರಾತುರಿಯಲ್ಲಿ ಹಣೆ ಬಟ್ಟಿಡುತ್ತಲೇ ಹೇಳಿದೆ, "ಅಪ್ಪಾ, ಕುವೆಂಪುರವರ ಮನೆ ನೋಡಿ ಬರೋಣ" ಎಂದು. ಇತ್ತೀಚೆಗಷ್ಟೇ ಕುವೆಂಪುರವರ 'ಶ್ರೀ ರಾಮಾಯಣ ದರ್ಶನಂ' ಓದಲು ಪ್ರಾರಂಭಿಸಿದ್ದ ನಾನು ಅದರ ಭಾಷೆ - ಭಾವಗಳಿಂದ ಪುಳಕಗೊಂಡಿದ್ದೆ. ಅದರ ದಾರ್ಶನಿಕತೆಗೆ ಮಾರುಹೋಗಿದ್ದೆ. ಕುವೆಂಪುರವರು ಹುಟ್ಟಿ ಬೆಳೆದ ವಾತಾವರಣ, ಆ ಪ್ರಕೃತಿಯ ಸೌಂದರ್ಯ ಅವರ ಬರಹಗಳ ಸ್ಪೂರ್ತಿಯ ಸೆಲೆಯಾಗಿತ್ತು ಎಂದಿದ್ದ ಅಪ್ಪನ ಮಾತು ನೆನಪಾಗಿ, ಅದನ್ನೇ ನೋಡಬಹುದೆಂಬ ಹಂಬಲವಾಯಿತು. ಅಪ್ಪ ಸ್ವತಹ ಕವಿ, ಕನ್ನಡಾಧ್ಯಾಪಕರು ಇನ್ನು ಕೇಳಬೇಕೆ! ಅವರಿಗೂ ನನ್ನ ಸಲಹೆ ಸೂಕ್ತವಾಗಿ ತೋರಿತು. ಆದರೆ ಅದರ ಜೊತೆಗೆ ನೋಡಿ ಬರುವ ಸ್ಥಳಗಳನ್ನು ಆಯ್ಕೆ ಮಾಡಬೇಕಲ್ಲ. ಎಲ್ಲರು ಯೋಚಿಸುವ ಎಂದು ಹೇಳಿ, ಗಡಿಯಾರನೋಡಿದೆ, ತುಂಬಾ ತಡವಾಗಿತ್ತು. ತಕ್ಷಣ ಆಫೀಸಿಗೆ ಹೊರಟೆ.


ಬಹು ಆಯ್ಕೆ ಪರದಾಟ


ಆಫೀಸಿನಲ್ಲಿ ಹೇಳಿ ಕೇಳಿ ವೀಕ್ ಎಂಡ್, ಮೇಲಿನ್ನು ಪ್ರವಾಸದ ಯೋಚನೆಯಲ್ಲಿ ಮುಳುಗಿಹೋಗಿತ್ತು ಮೈಂಡ್! ಕೆಲಸ ಮಾಡಲು ಮೂಡಿಲ್ಲ. ತೀರ್ಥಹಳ್ಳಿಯ ಕುಪ್ಪಳಿಯನ್ನು ಕೇಂದ್ರವಾಗಿಟ್ಟು ಆಸುಪಾಸಿನ ವೀಕ್ಷಣಾ ಸ್ಥಳಗಳನ್ನು ಗೂಗಲ್ ಮಾಡಿದೆ ಸಾಕಷ್ಟು ದೊರೆಯಿತು. ಈ ಗೂಗಲ್ನ ಅಪಾಯವೆನೆಂದರೆ, ಬೇಕಿದ್ದಕ್ಕಿಂತ ಹೆಚ್ಚಿನ ಮಾಹಿತಿ ದೊರೆತು ನಮ್ಮ ಆಯ್ಕೆಗೇ ಚ್ಯುತಿ ತರುತ್ತದೆ. ನನಗೂ ಹಾಗೆ ಆಯಿತು. ನನ್ನ ಸ್ನೇಹಿತರಿಂದ ಮತ್ತಷ್ಟು ಮಾಹಿತಿ. ಕುವೆಂಪು ಮನೆ, ಮಡಿಕೇರಿ, ಮಂಗಳೂರು, ಕೊಡಚಾದ್ರಿ, ಆಗುಂಬೆ, ಕೊಲ್ಲೂರು, ಹಿದ್ಲುಮನೆ ಜಲಪಾತ, ಉಡುಪಿ, ಕೊಡಗು, ಮೈಸೂರು, ಊಟಿ, ಕೊಡೈಕೆನಾಲ್,ಇನ್ನೂ ಹಲವಾರು. ಇಷ್ತೆಲ್ಲಕ್ಕೂ ಮೀಸಲಾದ ಸಮಯ ಎರಡೇ ದಿನ!

ದಿಕ್ಕು ತೋಚದ ನಾನು ಎಲ್ಲ ಆಯ್ಕೆಗಳನ್ನೂ ಹೊತ್ತು ನೇರ ಮನೆಗೆ ನಡೆದೆ. ಅಪ್ಪನ ಮುಂದೆ ಎಲ್ಲ ಆಯ್ಕೆಗಳನ್ನು ಇತ್ತು ನನ್ನ ಜವಾಬ್ದಾರಿ ಕಳೆದುಕೊಂಡೆ. ಕೊನೆಕ್ಷಣದ ನಿರ್ಧಾರದಿಂದ ಮುನಿದಿದ್ದ ಅಪ್ಪ, ಅದೇ ಸಿಟ್ಟಿನಲ್ಲಿ ಆಯ್ಕೆಗಳನ್ನು ಮೆಲುಕುಹಾಕತೊಡಗಿದರು.ಪರದಾಟ ಒಂದರಮೇಲೊಂದು ವಕ್ಕರಿಸುವಂತೆ ಆಗಲೇಪವರ್ ಕಟ್ ಆಗಿತ್ತು. ಇನ್ನು ಕೆಲವೇ ಘಂಟೆಗಳಲ್ಲಿ ನಾವು ಹೊರಡಬೇಕಿತ್ತು, ಟ್ಯಾಕ್ಸಿಬುಕ್ ಆಗಿತ್ತು,ಚೂಟಿ ಹೊರಡಲು ಅಣಿಯಾಗಿತ್ತು.ಆದರಿನ್ನೂ ಪ್ರವಾಸ ಸ್ಥಳಗಳೇನಿರ್ಧಾರವಾಗಿಲ್ಲ! ಕತ್ತಲಲ್ಲೇ ಕ್ಯಾಂಡಲ್ ಹಚ್ಚಿ ಕರ್ನಾಟಕ ಮ್ಯಾಪ್ ಹಿಡಿದ ಮೊಮೆಂಟ್ ಥ್ರಿಲ್ಲಿಂಗ್ ಆಗಿತ್ತು!

ಹೀಗೆಲ್ಲ ಆಯ್ಕೆ ಸಾಧ್ಯವಿಲ್ಲ ಎಂದರಿತ ಅಪ್ಪ ಕೊನೆಗೂ ಅವರ ಸ್ನೇಹಿತರಿಗೆ ಕಾಲ್ ಮಡಿ, ಅವರ ಹುಟ್ಟೂರಾಗಿದ್ದ ಶಿವಮೊಗ್ಗದ ಆಸುಪಾಸಿನ ವೀಕ್ಷಣಾ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಇರುವ ಎರಡು ದಿನದಲ್ಲಿ - ಆಗುಂಬೆ, ಸಿರಿಮನೆ ಜಲಪಾತ, ಶೃಂಗೇರಿ ಮತ್ತು ಕುಪ್ಪಳಿ ಕವರ್ ಮಾಡಬಹುದು ಎಂದು ಲೆಕ್ಕವಾಯಿತು. ಕೊನೆಗೂ ಸ್ಥಳಗಳು ಫೈಸಲಾದವು. ಅಷ್ಟರಲ್ಲೇ ನಿದ್ರಾದೇವತೆ ನಮ್ಮನ್ನಾವಾಹಿಸಿದ್ದಳು. ಮುಂಜಾನೆಯೇ ಪ್ಯಾಕಿಂಗ್ ಮಾಡುವ ಸಮೇತ ಸಿದ್ಧರಾದೆವು. ನಮ್ಮ ಸಡವರ ನೋಡಿ ಚೂಟಿಗೆ ತಿಳಿದೇ ಹೋಗಿತ್ತು. ಇವರೆಲ್ಲ ನನ್ನ ಬಿಟ್ಟು ಹೋಗುತ್ತಾರೆ ಎಂಬ ಭೀತಿಯಿಂದ ಮಂಚದ ಕೆಳಗೆ ಹೋಗಿ ಅವಿತಿದ್ದು ಕಂಡು ನಾವೆಲ್ಲಾ ಚಕಿತರಾದೆವು. ಅನುವಾಗಿದ್ದ ಸಮಯಕ್ಕೆ ಟ್ಯಾಕ್ಸಿ ಹಾಜರ್. ಚೂಟಿಯನ್ನು ಅದರ ನಿಗದಿತ ಸ್ಥಳಕ್ಕೆ ತಲುಪಿಸಿ ನಾವು ಹೊರಟೆವು. ಮರಿಯನ್ನು ಬಿಟ್ಟ ಬೇಸರ ಹಾಗು ಪ್ರವಾಸದ ಉತ್ಸಾಹ ಎರಡೂ ಕಲಸುಮೇಲೋಗರವಾಗಿ ಒಂದು ಹೊಸ ಅನುಭವ ತಂದಿತ್ತು.


ಅವಿದ್ಯಾವಂತನ ವೈಚಾರಿಕತೆ


"ಮೇಡಂ, ಬೇಕಾದ್ ಸಿಡಿ ಇಟ್ಕೋಳಿ, ನನ್ ಹತ್ರ ಇಲ್ಲ", ಗಾಡಿ ಸ್ಟಾರ್ಟ್ ಮಾಡುವ ಮೊದಲು ಉಲಿದ ಡ್ರೈವರ್. ಅಪ್ಪನ ಸ್ನೇಹಿತರು ಕಳುಹಿಸಿದ್ದ ಈ ಡ್ರೈವರ್ ಹೆಸರು ಗುಂಡ. ಸಣ್ಣ ಗಾತ್ರದ, ಚಿಕ್ಕ ಗಡ್ಡದ ಈ ವ್ಯಕ್ತಿಯ ವಯಸ್ಸು ಇಪ್ಪತ್ತೈದು ಮೀರಿರದು. ನಮ್ಮ ಪ್ರಯಾಣ ಶುರುವಾದಷ್ಟೇ ವೇಗವಾಗಿ ಸಾಗತೊಡಗಿತು. ಪ್ರಯಾಣ ಸಾಗುತ್ತಾ ಹಾಗೆ ತಿಂಡಿ ತೀರ್ಥದ ಸಮಯವಾಯಿತು. ಗಾಡಿ ನಿಲ್ಲಿಸಿ ಮನೆಯಿಂದ ಅಮ್ಮ ಮಾಡಿ ತಂದಿದ್ದ ತಿಂಡಿ ತಿಂದು ಮುಗಿಸಿದೆವು. ರಸ್ತೆ ಬದಿಯ, ಬಾಳೆ ಎಲೆಯ ಆ ತಿಂಡಿ ಕಾರ್ಯಕ್ರಮ ದೊಡ್ಡ ಹೋಟೆಲ್ ಗಿಂತ ಸುಖವಾಗಿತ್ತು. ದಾರಿಯಲ್ಲಿ ಕಂಡವರ ಜೊತೆಗೆ ಗುಂಡ ಉರ್ದುವನ್ನು ಸುಲಲಿತವಾಗಿ ಮಾತನಾಡುವುದನ್ನು ಕಂಡೆವು. ಅಷ್ಟರಲ್ಲೇ ನಮಗೆ ಸಿಕ್ಕಿತ್ತು ಒಂದು ಮುಸಲ್ಮಾನರ ದರ್ಗಾ. ಗುಂಡನ ಹೇಳಿಕೆಯ ಮೇರೆಗೆ ಎಲ್ಲರೂ ಇಳಿದು ದರ್ಗಾದ ಬಳಿ ಬಂದೆವು. ಒಳಹೊಕ್ಕಳು ಹಿಂಜರಿಯುತ್ತಿದ್ದ ನಾವು "ಓಗ್ಬಹುದು ಓಗ್ರಿ ಒಳಗೆ" ಎಂಬ ಗುಂಡನ ಮಾತು ಕೇಳಿ ಒಳಹೊರಟೆವು. ಅಲ್ಲೊಬ್ಬ ಮುಸಲ್ಮಾನ ಪಾದ್ರಿ ಅವರ ದೇವರಾದ ಸಮಾಧಿಯ ಎದುರು ಕುಳಿತಿದ್ದರು. ಆ ದರ್ಗಾ ಬಾಬಾಬುಡನ್ ಗಿರಿಗೆ ಸುರಂಗ ಮಾರ್ಗ ಎಂಬ ಅಂಬೋಣ! ನವಿಲುಗರಿಯ ಆಶೀರ್ವಾದದೊಂದಿಗೆ ದೇವರಿಗೆ ಬೆನ್ನು ಮಾಡದಂತೆ ವಂದಿಸಿ ನಾವು ಹಿಂತಿರುಗಬೇಕಿತ್ತು. ಇದು ಗುಂಡನ ಆದೇಶ!

ಮತ್ತೆ ಗುಂಡನ ಉರ್ದು ಚಮಕಿಯನ್ನು ಕಂಡ ನನಗೆ ಕುತೂಹಲ ತಡೆಯಲಾಗಲಿಲ್ಲ. "ನೀವು ಉರ್ದು ಇಷ್ಟು ಚೆನ್ನಾಗಿ ಮಾತನಾಡುತ್ತೀರಿ" ಎಂದೆ. ಅವನು, "ಮೇಡಂ, ನಾವು ಮುಸ್ಲಿಮ್ಸು" ಎಂದ! ಆ ಮಾತಿನಿಂದ ನಾನು ದಂಗಾದೆ! "ಮತ್ತೆ ಹೆಸರು?" ಕೇಳಿದೆ ನಾನು. "ಮೊಹಮ್ಮದ್ ಹುಸೇನ್ ನನ್ನೆಸ್ರು, ಆದ್ರೆ ಎಲ್ರೂ ಕರಿಯೋದು ಗುಂಡ, ಯಾಕೆ ಅಂದ್ರೆ ನಂಗೆ ಚಿಕ್ಕಂದ್ನಲ್ಲಿ ತಲೇಲಿ ಕೂದಲೇ ಇರಲಿಲ್ಲವಂತೆ" ಎಂದು ಹೇಳಿ ನಕ್ಕ. ಅವನ ಕನ್ನಡ ಭಾಷೆಯ ಸುಲಲಿತತೆ ಭಾಗಶಃ ಕನ್ನಡಿಗರಿಗೂ ಇಲ್ಲವೇನೋ ಎಂಬಂತೆ ಇತ್ತು. ಇದನ್ನು ಕೇಳಿ ಬೆರಗಾಗಿ ಅಪ್ಪ ಅವನನ್ನು ಮತ್ತಷ್ಟು ಮಾತಿಗೆಳೆದರು. ಆಗ ಅವನು "ಸಾರ್, ನಂದೊಂದು ದೊಡ್ಡ ಸ್ಟೋರಿ" ಎಂದು ಹೇಳಿ ಪ್ರಾರಂಭಿಸಿದ. ಮುಸಲ್ಮಾನನಾದ ಅವನು ಒಬ್ಬ ಕುರುಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಹಿಂದೂ ಮುಸ್ಲಿಂ ಸಮಾಗಮವನ್ನು ಒಪ್ಪದ ಜನರಿಂದ ದೂರವಾಗಿದ್ದ. ಅಂತರ್ ಜಾತಿಯಲ್ಲ, ಅಂತರ್ ಮತೀಯತೆಗೂ ಮೀರಿತ್ತು ಈ ಹೆಚ್ಚೇನೂ ವಿದ್ಯಾವಂತನಲ್ಲದವನ ಜಾತ್ಯಾತೀತತಾ ಮನೋಭಾವ! "ಏನ್ ಸರ್, ಈ ಜಾತಿ ಇದೆಲ್ಲಾ ನಾವೇ ಮಾಡ್ಕೊಂಡಿದ್ದು ಅಲ್ವಾ" ಎಂದು ಹೇಳಿ ಅವನು ತನ್ನ ಹೆಂಡತಿಯ ಗುಣಗಾನಕ್ಕಿಳಿದ. ನನ್ನ ಮನಸ್ಸಿನ್ನೂ ಅದೇ ಹಿಂದೂ-ಮುಸ್ಲಿಂ ಕತೆಯನ್ನು ಗುನುಗಿತ್ತು.

ಈ ಅವಿದ್ಯಾವಂತ ಹುಡುಗನಷ್ಟೇ ಸರಳವಾಗಿ ಜನ ಯಾಕೆ ಆಲೋಚಿಸಬಾರದು? ಜನ ವಿದ್ಯಾವಂತರಾಗುತ್ತಾ, ಸುಸಂಸ್ಕೃತರಾಗುತ್ತಾ ನ್ಯಾರೋ ಮೈಂಡ್ ಆಗ್ತಾರೆ ಅನ್ನೋ ಅಪ್ಪನ ಮಾತು ನೆನಪಾಯಿತು. ನಿಜವೆನಿಸಿತು. ಅವನ ಹೆಂಡತಿ ಬಗೆಗಿನ ಪ್ರೀತಿ ತುಂಬಿದ ಮಾತುಗಳು ನಮಗೆಲ್ಲರಿಗೂ ಪ್ರಿಯವಾಗಿತ್ತು. ಅವನ ಮುಗ್ಧತೆಯ, ಒಳ್ಳೆಯತನಕ್ಕೆ ಅಷ್ಟೇ ಗೌರವ ಹೆಚ್ಚಿತ್ತು. ಪ್ರಯಾಣ ಮುಂದೆ ಸಾಗಿತ್ತು.


ಭದ್ರವಾದ ಭದ್ರಾವತಿ ಅಣೆಕಟ್ಟು


ಆಗುಂಬೆಯತ್ತ ಮುಖಮಾಡಿದ್ದ ನಮಗೆ ನಡುವಿನಲ್ಲಿ ದೊರೆತ ಮತ್ತೊಂದು ಪ್ರಸಾದ ಭದ್ರಾವತಿ ಅಣೆಕಟ್ಟು. ಪ್ರಕೃತಿ ಸೌಂದರ್ಯಕ್ಕೆ ಹಾತೊರೆದಿದ್ದ ಮನ, ಆ ಪ್ರಕೃತಿಯನ್ನು ಚೌಕಟ್ಟಾಗಿಸುವ ವಿಜ್ಞಾನದ ಕಡೆ ಮುಖಮಾಡಲು ಮೊದಲಿಗೆ ಇಚ್ಚಿಸಲಿಲ್ಲ. ಆದರೂ ಅಪ್ಪನಿಗಿದ್ದ ನೀರಾವರಿ ಯೋಜನೆಗಳ ಬಗೆಗಿನ ಆಸಕ್ತಿಯ ಮೇರೆಗೆ ಭದ್ರಾವತಿ ಅಣೆಕಟ್ಟನ್ನು ಆವಿಷ್ಕರಿಸಲು ಹೊರಟೆವು. ಅದನ್ನು ತಲುಪಿದ ನಂತರ ತಿಳಿಯಿತು ನನ್ನ ಭಾವ ತಪ್ಪೆಂದು. ಆ ಸುನೀಲವಾದ ಅಗಾಧವಾದ ಭದ್ರಾವತಿ ನದಿಯ ಸೊಬಗಿಗೆ ಕಣ್ಮನ ತಣಿಯಿತು. ಕಂಡಷ್ಟೂ ಕಾಣುವಂತ ಆ ವಿಸ್ತೃತ ಜಲಧಾರೆಗೆ ಮತ್ತಾ ಭದ್ರ ನಿರ್ಮಿತ ಕಟ್ಟಡಕ್ಕೆ ಮನದಲ್ಲೇ ಮಣಿದು ಅಲ್ಲಿಂದ ಹೊರಟೆವು.
ಹಾದಿಯಲ್ಲಿ ಕಂಡ ಮತ್ತೊಂದು ಅಣೆಕಟ್ಟು, ಗಾಜನೂರಿನದು. ಭದ್ರಾವತಿಯಷ್ಟು ವಿಸ್ತಾರವಾಗಿ, ಮಜಬೂತಾಗಿಲ್ಲದಿದ್ದರೂ ತನ್ನದೇ ಆದ ಆಕರ್ಷಣೆಯನ್ನು ಹೊಂದಿತ್ತು. ಅಲ್ಲಿಂದ ಹೊರಟ ನಾವು ನಡುವೆ ಉದರ ಪೂಜೆಯನ್ನು ಮುಗಿಸಿ ಪ್ರಯಾಣ ಮುಂದುವರೆಸಿದೆವು.




ಆಗುಂಬೆಯಾ... ನಿರಾಶೆ ಸಂಜೆಯಾ!


ಆಗುಂಬೆಯೆಡೆಗೆ ಮುಖಮಾಡಿ ಹೊರಟ ನಮಗೆ ನಡುವೆ ಕೆಲವು ವೀಕ್ಷಣಾ ಸ್ಥಳಗಳು ದೊರೆತರೂ, ಆಗುಂಬೆಯ ಸೂರ್ಯಾಸ್ತ ತಪ್ಪಿಹೊಗಬಾರದೆಂಬ ಆತಂಕದಿಂದ ಎಲ್ಲವನ್ನೂ ಬಿಟ್ಟು ನೇರ ಪಯಣ ಮುಂದುವರೆಸಿದೆವು. ಕಾಡಿನ ನಮ್ಮ ಪಯಣ ಸಾಗುತ್ತಾ ಹೋದಂತೆ, ಆ ವನರಾಶಿಯ ಸಿರಿತನ, ನೀರವತೆ ಮತ್ತು ಗಾಂಭೀರ್ಯತೆಯನ್ನುಣ್ಣುತ್ತಾ ಕಳೆದುಹೋಗಿದ್ದೆವು. ಪ್ರಕೃತಿ ದೇವತೆ ನಮ್ಮನ್ನು ಪ್ರೇಮದಿಂದ ತನ್ನ ಮಡಿಲಿಗೆ ಸ್ವೀಕರಿಸಿದಂತಾ ಅನುಭೂತಿ! ಸಂಜೆಗತ್ತಲಾಗುವ ಮುನ್ನ ಆಗುಂಬೆ ತಲುಪುತ್ತೆವೆಯೋ ಎಂಬ ಅನುಮಾನ, ತರಾತುರಿ.

ಕೊನೆಗೂ ಸಿಕ್ಕಿತು ನಮ್ಮ ಡೆಸ್ಟಿನೇಶನ್ ಪಾಯಿಂಟ್ ಆಗುಂಬೆ. ಸೂರ್ಯಾಸ್ತಮಾನಕ್ಕೆ ಸಾಕಷ್ಟು ಸಮಯವಿತ್ತು. ವ್ಯೂ ಪಾಯಿಂಟ್ ತಲುಪಿ ಸುತ್ತೆಡೆಯ ಮನೋಹರ ದೃಶ್ಯವನ್ನು ಆನಂದಿಸತೊಡಗಿದೆವು. ಪ್ರಕೃತಿಯ ರಮಣೀಯ ದೃಶ್ಯ, ಎಲ್ಲೆಡೆ ಹಸಿರ ಸಿರಿ. ಸೂರ್ಯನ ಅಸ್ತಮಾನದ ನಿರೀಕ್ಷೆಯ ಜೊತೆಗೆ ಜನಜಂಗುಳಿಯೂ ಹೆಚ್ಚುತ್ತಿತ್ತು. ಅಲ್ಲಿ ನೆರೆದಿದ್ದ ಎಲ್ಲರೂ ಏಕತಾನದಿಂದ ಕಾಯುತ್ತಿದ್ದುದು ಬೆಳಕನೀವ ಭಾನುವನ್ನು ಮುಳುಗಿಸುವುದಕ್ಕೆ? ಹೀಗೆ ಯೋಚಿಸಿ ನಗು ಬಂತು. ಸೂರ್ಯ ಮುಳುಗಿ, ಆಗಸದ ಮರೆಯಲ್ಲಿ ಲೀನವಾಗಿ ಕತ್ತಲೆಯನ್ನಬ್ಬುವುದು ನಿಜಕ್ಕೂ ಸಂತೋಷದ ವಿಷಯವೇ? ಎಂಬ ಕನ್ಫ್ಯೂಶನ್ ನಲ್ಲಿದ್ದ ನನಗೆ, ಆಗಷ್ಟೇ ವಾನರ ಸೈನ್ಯದಂತೆ ನೆರೆದಿದ್ದ ಕಾಲೇಜ್ ಹುಡುಗ ಹುಡುಗಿಯರ ಗುಂಪೊಂದು ನೆಲೆಸಿದ್ದು ಅರಿವಾಯಿತು. ಅವರ ನಗು, ಚೀರಾಟ, ಒಬ್ಬರನ್ನೊಬ್ಬರು ಕೆಣಕುವ ಬಗೆ, ಕೇರ್ ಫ್ರೀ ಆಟಿಟ್ಯೂಡ್ ನಮ್ಮನ್ನು ಸಿಟ್ಟಿಗೆಬ್ಬಿಸಿದರೂ, ಒಳ್ಳೆಯ ಟೈಮ್ ಪಾಸ್ ಆಗಿತ್ತು. ಅವರ ಮಾತುಗಳ ಬೇಸ್ ನಲ್ಲಿ ಕಥೆಗಳನ್ನು ಹೆಣೆಯುತ್ತಾ ಹೋದಂತೆ ಸೂರ್ಯಾಸ್ತದ ಸಮಯ ಹತ್ತಿರವಾಗಿತ್ತು.

ಕೊನೆಯವರೆಗೂ ನಮ್ಮ ಸಾಥ್ ನೀಡಿದ ಸೂರ್ಯ ಇನ್ನೇನು ಮುಳುಗಬೇಕು ಎಂದಾಗ ಮೋಡದ ಮರೆಯಾಗಿ ನಮ್ಮೆಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸಿದ. ಅಷ್ಟೆಲ್ಲಾ ನಿರೀಕ್ಷಿತರಾದ ನಾವು ನಿರಾಶೆಯಾಗಿ ಹಿಂತಿರುಗಿದೆವು. ಆದರೂ ಸ್ಥಳಮಹಿಮೆಯೆಮ್ಬಂತೆ ಪ್ರಕೃತಿಯ ನೋಟದಿಂದ, ಅದರ ಅನುಭವದಿಂದ ನಾವು ಸಂತ್ರುಪ್ತರಾಗಿದ್ದೆವು. ಆಗುಂಬೆಯಿಂದ ಶೃಂಗೇರಿಯತ್ತ ನಮ್ಮ ಮುಂದಿನ ಪಯಣ.

(ಮುಂದುವರೆದಿದೆ...)