ನಡೆ ಮುಂದೆ ನನ ಕಂದ
ನಲಿವಿನೊಲ್ಮೆಯ ಮಗುವೆ
ಹಿಡಿದು ಕೈ ನಡೆಸೆನ್ನ
ಈ ಜಗದ ನಡುವೆ
ನೀ ಹುಟ್ಟಿದಂದೆ ನಾ ಪಡೆದೆ ಹೊಸ ಜನುಮ
ಮರುಹುಟ್ಟೆನಗೆ ತಂದೆಯಾಗಿ
ನಿಜದ ಸುಖವರಿಯಲು, ಕಲಿಯಲು, ಕಲಿಸಲು
ನೀ ಬಂದೆ ನನ ಬಾಳ ಕಾಣ್ಕೆಯಾಗಿ
ಅದೋ ನೋಡಲ್ಲಿ ದೂರದಾ ಗಗನ ಖಗ
ಸ್ವಚ್ಚಂದ ಏರು ನೀ ಎತ್ತರಕೆ ಅದರಂತೆ
ಇತಿಮಿತಿಗಳೆಲ್ಲೆಗಳ ಸವಾಲಂತೆ
ಎಲ್ಲ ಪ್ರತಿಬಂಧಗಳ ಮೀರುವಂತೆ
ಜೊತೆಗಿರುವೆ ನಾ ಎಂದು ಜೀವನದಿ
ಸಾಗುತಿರು ನೀ ಮುಂದೆ ಸಂತೋಷದಿ
ಸುಗಮವಾಗಲಿ ನಿನಗೆ ಸಾಧನೆಯ ಹಾದಿ
ಹೊಳೆಯಲಿ ಬಾಳ್ಬೆಳಕು ಈ ಕಡಲಂತೆ ವಿಸ್ತಾರದಿ
ಅರಳಲಿ ಹೀಗೆಯೇ ಈ ನಿನ್ನ ಮುದ್ದು ಮೊಗ
ಮಾಸದಿರಲೆಂದಿಗೂ ಆ ಮುಗ್ಧ ತುಂಬು ನಗೆ
ಬಳಿಸುಳಿಯದಿರಲಿ ಬವಣೆಗಳೆಂದಿಗೂ
ಇದೇ ನನ್ನ ಪ್ರೀತಿಯ ಹಾರೈಕೆ ನಿನಗೆ