Friday, February 11, 2011

ನಿನ್ನ ಭಾಷೆ ಕಲಿಸೋ ಗೆಳೆಯಾ...



"ಹೇಗಿದ್ದೀ?"
"ಚೆನ್ನಾಗಿರುವೆ"
"ಮತ್ತೇನು?"...
ಮತ್ತೇನೆಂದೆಯಾ ಗೆಳೆಯಾ!
ನೂರಾರಿವೆ ಮಾತು ಮನದಾಳದಲಿ
ವರುಷಗಳಿಂದ ಕನವರಿಸಿ ಹಡೆದದ್ದು
ಹುದುಗಿಸಿಟ್ಟದ್ದು, ನೆನೆದದ್ದು, ಮರೆತದ್ದು
ಸುಮ್ಮನೆ ಕಾಲು ಚಾಚಿದಾಗ ತೇಲಿ ಬಂದದ್ದು
ಅಯ್ಯೋ! ನಾನು ಹಿಂದೆ ಹೀಗಿದ್ದೆನೆ ಎಂದು ನಕ್ಕದ್ದು
ಮುಗ್ಧತೆಯ ಸುಖ ಉಂಡದ್ದು
ಹೀಗೆ ಇನ್ನಷ್ಟು, ಮತ್ತಷ್ಟು, ಸಾಕಷ್ಟು...
ಕೊನೆಗೆ ಬಾಯಿಗೆ ಬಂದದ್ದಿಷ್ಟು
"ಏನಿಲ್ಲ...ಊಟವಾಯಿತೇ?"
"ಹುಂ"
ಅಲ್ಲಿಗೆ ಮುಕ್ತಾಯ!
ತಂತ್ರಾಂಶದ ಅಂಶವಾದ ಬದುಕಿನ
ಬಿಡುವಿಲ್ಲದ ಕಾರ್ಯಮಗ್ನ ಜೀವನ ನಿನ್ನದು
ನೀನಂತೂ ನಗುತ್ತೀ, ಇವಳ್ಯಾಕೆ ಹೀಗೆ
ಒಂಥರಾ ವಿಚಿತ್ರ ಎಂದು...
ಹೇಗೋ ತಿಳಿಹೇಳಲಿ ನಿನಗೆ
ನನ್ನೆಲ್ಲ "ಮತ್ತೇನುಗಳನ್ನ"...
ಇದೇ ಯೋಚನೆಯಲ್ಲಿದ್ದಾಗ ಬಂದದ್ದು
ಮತ್ತೊಂದು ಸಂದೇಶ
"ಹಲೋ ಹೌ ಆರ್ ಯು"
ನೋಡಿ ನೆಮ್ಮದಿಯ ನಗೆ ನಕ್ಕೆ!..
ನಿನ್ನ ಮೌನ ಸಂಭಾಷಣೆ
ಮನಸಿನ ಭಾವನೆಗಳನ್ನು
ಅರಿಯಲು, ಅದಕನುವಾಗಲು
ನಿನ್ನ ಭಾಷೆ ಕಲಿಸೋ ಗೆಳೆಯಾ...
"ಫೈನ್" ಎಂದು ಮಾರುತ್ತರಿಸಿದೆ!