ಕೊರಲ ದನಿಯೋ
ತಂದ ರಾಗವ ಆಲಿಸಿ
ಗುಟ್ಟಾಗಿ ಆನಂದಿಸಿದೆ
ಇಂಪಾದ ಈ ರಾಗ
ಆ ಹಳೆಯ ಹಾಡಿಗಿಂತ ಮಧುರ
ಶ್ರುತಿ ಸೇರದ ಆ ರಾಗ
ಲಯತಾಲಗಳು ಒಲಿವ ಈ ರಾಗ
ರಾಗ ತಾಳವೋ
ಭಾವ ಒಲವೋ
ಒಂದೂ ಅರಿಯೆ ನಾ
ಇದು ಯಾವ ರಾಗ!
ಪಕ್ಕದಲ್ಲೇ ಮಲಗಿದ್ದ ಪುಟ್ಟ ಟಾಮಿಯ ಬೆಚ್ಚನೆ ಕೂದಲು ಮುದ ನೀಡಿತ್ತು. ಕಣ್ಣುಗಳು ತೇವವಾಗಿತ್ತು. ಏಕೋ ತಿಳಿಯದ ತವಕ. ದುಗುಡ ಉಕ್ಕಿ ಬರುತ್ತಿತ್ತು. ಮತ್ತೆ ಮತ್ತೆ ಆ ಚಲನ ಚಿತ್ರದ ಹೆಸರು ತಲೆಯಲ್ಲಿ. ಆದರೆ ಜೀವನ ಅದರ ತದ್ವಿರುದ್ಧ ಎನಿಸುತ್ತಿತ್ತು. ಜೀವನದ ಮಜಲುಗಳು ತನಗೇ ಗೊತ್ತಿಲ್ಲದೆ ವಿಚಿತ್ರ ತಿರುವುಗಳನ್ನು ಕಂಡಿದ್ದವು. ಸಾಧಾರಣ ಹೆಂಗಳೆಯರಲ್ಲಿ ತಾನು ಒಬ್ಬಳಾದ ಸೀತಾ, ದಾಂಪತ್ಯಕ್ಕೆ ಕಾಲಿಡುವ ಮುನ್ನ ತನ್ನದೇ ಆದ ಸುಂದರ ಸ್ವಪ್ನ ಮಹಲನ್ನು ಕಟ್ಟಿದ್ದಳು. ಆರಂಭದಲ್ಲಿ ಆ ಮಹಲು ತನ್ನದಾಯಿತೆಂದು ಆಕೆಯೂ ಸಂತೈಸಿದ್ದಳು. ತನ್ನ ಪತಿಯೇ ಪರ ದೈವ ಎಂದು ಪೂಜಿಸುತ್ತಿದ್ದಳು ಸೀತೆ. ತನ್ನನ್ನು ಅಪಾರವಾಗಿ ಪ್ರೀತಿಸುವ, ಎಲ್ಲ ಹೆಂಗಸರು ಬೇಡುವಂಥ ಸುಗುಣ ಗಂಡ. ಮತ್ತೇನು ಬೇಕು, ಜಗತ್ತೇ ತನ್ನದಾದ ಸಂತೋಷದಲ್ಲಿದ್ದ ಸೀತಳಿಗೆ, ಈಗ ಮತ್ತೊಂದು ಮಾರ್ಮಿಕವಾದ ಪ್ರಪಂಚದ ಪರಿಚಯವಾಗಿತ್ತು! ಅದರ ಮೌಲ್ಯಗಳು ತಪ್ಪು ಎಂದು ತಿಳಿದಿದ್ದರೂ, ಅದರ ವಾಂಛೆ! ಕಣ್ಣು ಮೊಬೈಲ್ನತ್ತ...
ಪುಸ್ತಕ ಹಿಡಿಯಲೆಂದು ಎದ್ದಳು, ಎದ್ದ ಕೂಡಲೇ ನಾಯಿ ಮರಿ ಎದ್ದೋಡಿತ್ತು. ಮತ್ತೆ ಕಣ್ಣು ಮೊಬೈಲ್ನತ್ತ. ಛೆ! ಏನಾಗುತ್ತಿದೆ. ಸೀತಳಿಗೆ ತಾನೊಬ್ಬಳು ತಾಳ್ಮೆಯಿಲ್ಲದ ಹೇಡಿ ಎನಿಸಿತು. ಹಳೆಯ ದೃಷ್ಟಾಂತಗಳು ಕಣ್ಣನ್ನು ಹಾಸಿ ಕಟ್ಟಿತ್ತು. ಮನಸ್ಸು ಮರ್ಕಟ. ಪಾಸ್ಟ್, ಪ್ರೆಸೆಂಟ್, ಫ್ಯೂಚರ್ ಎಲ್ಲ ಕ್ಷಣದಲ್ಲಿ ತಟಸ್ಥ. ಸ್ಥಬ್ದತೆ ಮುಂದುವರೆದಿತ್ತು. "ಕಥಾಹಂದರದಲ್ಲಿ ಹೊಸ ಪಾತ್ರಗಳು?!" ಮತ್ತೆ ಝೀ ಟಿವಿ, ಸ್ಟಾರ್ ಪ್ಲಸ್, ಈ ಟಿವಿ....ಕಣ್ಣುಗಳು ಸೋತವು, ಎದೆ ಭಾರ. ಯಾರದು ಬೆನ್ನ ಹಿಂದೆ? ಒಹ್! ಒರಗು ದಿಂಡು. ತನಗರಿವಿಲ್ಲದೆ ಅನೇಕ ವಿಚಾರಗಳು ಒಮ್ಮೆಲೇ ಹರಿದವು. ಜೀವನವೇ ಹೀಗೋ ಅಥವಾ ತಾನು ಹೀಗೋ ತಿಳಿಯದು. ಚಂದಿರನೂ ಬೇಕು, ತಾರೆಯು ಬೇಕು, ಮತ್ತೊಮ್ಮೆ ಯಾವುದು ಬೇಡ!
ದಿನವಿಡೀ ನಡೆದ ಘಟನೆಗಳನ್ನೆಲ್ಲಾ ನೆನೆದಳು, ಮುಗಿದಿತ್ತು. ಉಸಿರುಗಟ್ಟುವ ವಾತಾವರಣ. ಎದ್ದು ದೀಪ ಹಚ್ಚಿದಳು. ತಾನು ಮಾಡುತ್ತಿರುವುದೆಲ್ಲ ಸರಿಯೋ ತಪ್ಪೋ ತಿಳಿಯದು. ನಂಬಿಕೆ ಮತ್ತು ಅರ್ಹತೆ ಎಂಬ ಪದಗಳು ತನ್ನನ್ನು ಕಾಡಿದ್ದವು. ತನ್ನ ಪತಿ ತನ್ನ ಬಗ್ಗೆ ಇಟ್ಟಿರುವ ಅಪಾರ ಪ್ರೀತಿ ಮತ್ತು ನಂಬಿಕೆಗೆ ತಾನು ಅರ್ಹಳೆ ಎಂಬ ಗಿಲ್ಟ್ ಕಾಡಿತ್ತು. ನಿರ್ಮಲ ನದಿ, ಮತ್ತೊಮ್ಮೆ ಭೋರ್ಗರೆವ ಜಲಪಾತ. ಹುಚ್ಚು ಮನಸ್ಸು. ಅದಕ್ಕೆ ತೃಪ್ತಿಯಿಲ್ಲ. ದೃಷ್ಟಿ ಮೊಬೈಲ್ನತ್ತ. ಜೀವನದ ಮುಂದಿನ ಪಯಣ? ಈಗಿನ ಮನಸ್ತಿತಿ? ಎರಡನ್ನು ಯೋಚಿಸಿ ಗಾಬರಿಗೊಂಡಳು.
ಕ್ಯಾಲೆಂಡರಿನ ಹೆಣ್ಣು ತನ್ನನ್ನು ನೋಡಿ ನಕ್ಕಳು, ಸಹಿಸಲಾಗದೆ ಕಣ್ಮುಚ್ಚಿದಳು. ತನ್ನಲ್ಲಿನ inferiority ಹಾಗು superiority ಕಾಂಪ್ಲೆಕ್ಸ್ ಎರಡೂ ಒಟ್ಟಿಗೆ ಮುನ್ನುಗ್ಗಿ ಅವಳ ತಲೆ ಇನ್ನಷ್ಟು ಕೆಟ್ಟಿತು. ಓದಿದ್ದ ಪದ್ಯ ಕಣ್ಣಿಗೆ ಕಟ್ಟಿತ್ತು. ಆತ್ಮಾಭಿಮಾನವೋ, ತ್ರುಷೆಯೋ ಅಥವಾ ಬವಣೆಯೋ ಒಂದೂ ಅರಿಯದೇ ಮೂಕಿಯಂತೆ, ತನ್ನ ಮಾತನ್ನು ತಾನೆ ಕೆಳದಾದಳು. "ಆ? ನಾನೇನು ಹೇಳಿದ್ದು? ನನಗೆ ಕೇಳಿಸಲೇ ಇಲ್ಲ. ಒಂದೇ ಒಂದೂ ಬಾರಿ ತೇಲಿ ಬಂದ ಮನದ ಅಸ್ಪಷ್ಟ ಮಾತು ಮತ್ತೆಂದಿಗೂ ತೇಲಿ ಬರಲೇ ಇಲ್ಲ ಅಥವಾ ನನಗರಿವಾಗಲಿಲ್ಲ?" ಹೀಗೆಲ್ಲ ಅವಳ ಮಾನಸ ಲಹರಿ ಬಿರುಗಾಳಿಯಾಗಿತ್ತು.
"ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ?" ಹಾಡು ನೆನಪಾಗಿ ಮೈ ಬೆಚ್ಚಗಾಯಿತು. ಹೂವಿನ ರಾಶಿಯ ಹಿಂದೆಯೇ ಮುಳ್ಳಿನ ಬೇಲಿ! ಅಮೃತದೊಡನೆಯೇ ವಿಷ, ಇದರಲ್ಲಿ ಅಮೃತ ಹೆಚ್ಚೋ, ವಿಷ ಹೆಚ್ಚೋ ತಿಳಿಯದಾಯಿತು. ಕನಸಿನಲ್ಲಿ ಕಂಡ ಹಾವು ಮೆಲ್ಲನೆ ಮೈಯನ್ನಾವರಿಸಿತ್ತು. ಹಾಲಾಹಲವನ್ನು ಅಮೃತವನ್ನಾಗಿ ಪರಿವರ್ತಿಸುವ ಪ್ರಯತ್ನ. "ಓಹ್ ಜೀವನವೇ ಇನ್ನಾದರೂ ನನ್ನನ್ನು ರೂಪಿಸು!" ಎಂದು ಅಂತರಾತ್ಮ ಕೂಗಿತ್ತು. ಕಣ್ಮುಚ್ಚಿದಳು. ನಿದ್ದೆ ಹತ್ತಲಿಲ್ಲ. ಆಫೀಸ್ ಕೆಲಸ ಮಾಡುತ್ತಾ ತನ್ನ ಲ್ಯಾಪ್ಟಾಪ್ ಮೇಲೆ ಮಲಗಿದ್ದ ಗಂಡನನ್ನೊಮ್ಮೆ ನೋಡಿದಳು. ದುಖ ಉಕ್ಕಿ ಬಂತು. ಹತ್ತಿರ ಬಂದು ತಲೆ ಸವರಿದಳು. ಎಚ್ಚರಗೊಂಡ ಗಂಡ, "ಒಹ್ ಸಾರೀ, ನಾನು ಹಾಗೆ....ಎಂದು ಹೇಳಿ ನಿದ್ದೆಗಣ್ಣಲ್ಲೇ ಹೋಗಿ ಮಲಗಿದ. ಸೀತೆ ನಿಟ್ಟುಸಿರು ಬಿಡುತ್ತಾ ತಾನು ಮಲಗಿದಳು.
ಮೊಬೈಲ್ನ ಸದ್ದು!!! ಪುಳಕಗೊಂಡ ಸೀತೆ ಜಿಗಿದೆದ್ದು ಮೊಬೈಲ್ ಹಿಡಿದಳು. ಆದರೆ ಮುಗ್ಧವಾಗಿ ಮಲಗಿದ್ದ ಗಂಡನ ಮುಖ ಕಂಡು, ಅವಳಿಗೆ ತನ್ನ ಬಗ್ಗೆಯೇ ಹೇಸಿಗೆ ಎನಿಸಿತು. ದೀರ್ಘ ಉಸಿರು ಬಿಟ್ಟ ಸೀತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಪಕ್ಕದಲ್ಲಿತ್ತಳು. ಎದ್ದು ಹೋಗಿ ಮುಖ ತೊಳೆದು ಕನ್ನಡಿ ನೋಡಿದಾಗ, ತನ್ನ ಕಣ್ಣಲ್ಲಿ ಒಂದು ಧೃಡ ನಿರ್ಧಾರದ ಹೊಳಪನ್ನು ಕಂಡು ಆತ್ಮವಿಶ್ವಾಸದಿಂದ ಮಲಗಿದಳು. ಸಾಮಾನ್ಯವಾಗಿ ಸೀತೆ ಕಾಣುತ್ತಿದ್ದ, ದೂರದ ಮರದ ಹೊಳೆವ ಹಣ್ಣನ್ನು ಕೀಳಲು ಹೋಗಿ ಮುಳ್ಳಿನ ಬೇಲಿಯ ಹೊಂಡದಲ್ಲಿ ಬೀಳುವ ಕನಸು ಅಂದು ಬರಲಿಲ್ಲ, ಬದಲಾಗಿ ನೆಮ್ಮದಿಯ ನಿದ್ದೆ ಮಾಡಿದಳು.
ಬೆಚ್ಚನೆ ಕೈಗಳು ತನ್ನ ತಲೆ ಸವರಿದಂತೆ ಭಾಸವಾಗಿ ಬೆಚ್ಚಿ ಎದ್ದಳು. ಕಾಫಿ ಕಪ್ ಕೈಲಿ ಹಿಡಿದ ಗಂಡ "ಏಳೋ, ಟೈಮ್ ಆಯಿತು, ಆಫೀಸ್ ಇಲ್ವಾ?" ಎಂದ. ಸಣ್ಣ ನಗು ಬೀರುತ್ತಾ ಎದ್ದು, ಕೂದಲು ಗಂಟು ಹಾಕಿ, ಕಾಫಿ ಹೀರುತ್ತಾ, "ಆನಂದ್..." ಎಂದು ರಾಗ ಎಳೆದಳು. "ಏನು" ಎಂದಾಗ "ನಾನು ಮೊಬೈಲ್ ಸಿಮ್ ಚೇಂಜ್ ಮಾಡ್ತೀನಿ" ಎಂದು ಹೇಳುತ್ತಾ, ಟವೆಲ್ ಹಿಡಿದು ಸ್ನಾನದ ಮನೆಗೆ ನಡೆದಳು.