Wednesday, November 27, 2013

ಹೂ ಹುಡುಗಿ




ಕೆಂಪು ಹೂ ಕೊಳ್ಳುವ 
ಕಾರಿನರಸನನ್ನು ಅರಸುತ್ತಾ 
ಗಾಜಿನೊಳಗ ಇಣುಕಿದಾಗ 
ತನ್ನನ್ನೇ ಕಂಡ ಆ ಹುಡುಗಿಗೆ ಬೆರಗು!

ಎಷ್ಟು ದಿನವಾಗಿತ್ತು ಕನ್ನಡಿಯಲಿ
ಮುಖ ಕಂಡು, ಅಂದು
ಅದ್ಯಾರೋ ಒಬ್ಬ ಮನೆಗೆ ಬಂದಾಗ
ಅಮ್ಮ ಪೆಟ್ಟಿಗೆಯಿಂದ ತೆಗೆದಿಟ್ಟಿದ್ದ
ಒಡೆದ ಕನ್ನಡಿಯಲಿ ಒಮ್ಮೆ ಇಣುಕಿದ್ದು
ಇಂದು ಹಸಿ ಹಸಿ ನೆನಪು
ಜೊತೆಗೆ ಅಮ್ಮನ ಕನವರಿಕೆ

'ಹಣೆಮೇಲೆ ಅದುರುವ ತುಟಿಯೊತ್ತಿ
ಬಿಗಿದಪ್ಪಿ ಅತ್ತು ಮುದ್ದಾಡಿ
ಇಂಥದೇ ಕಪ್ಪು ಗಾಜಿನ ಕಾರಿನಲ್ಲಿ
ಕೂತು ಹೊರಟೇಬಿಟ್ಟ ಅಮ್ಮನಿಗೆ
ಏನೋ ಕಷ್ಟ ಕಾರಣವಿರಲೇ ಬೇಕು
ಇಲ್ಲದಿದ್ದರೆ ಅವಳು ಬಿಟ್ಟು ಹೋಗುವಳೇ?'

ಥಟ್ಟನೆ ಮತ್ತೊಮ್ಮೆ ಒಳಗೆ ಕಣ್ಣಾಡಿಸುವಳು
ಒಳಗಿರುವ ಕಪ್ಪು ಗಾಜಿನ ಕನ್ನಡಕದ ಹೆಣ್ಣು ತನ್ನಮ್ಮನೇ?
'ಇಲ್ಲ, ಹೂ ಬೇಡವೆಂದು ಕೈ ಆಡಿಸಿಬಿಟ್ಟಳು
ಅಮ್ಮನಿಗೆ ಹೂವು, ನಾನು ಎರಡೂ ಇಷ್ಟ
ಮತ್ತೇಕೆ'.....?!

ಪಕ್ಕದ ಮೋಟಾರ್ ಗಾಡಿಯ ಹಾರನ್ನು
ಅಮ್ಮನ ಮರೆಸಿ, ಮಂಜಾದ ಕಣ್ಣನ್ನು
ಸರಿಪಡಿಸಿಕೊಳ್ಳುತ್ತಾ ಮಿಟುಕಿಸಿ…
"ಸ್ವಲ್ಪ ಹೂ ತೊಗೊಕ್ಕಾ..ಗಮಗಮಾ ಅನ್ನತ್ತೆ"
ಒಳಗಿನಿಂದ ನಿಷ್ಕರುಣ ಮೌನ
ಗಟ್ಟಿಯಾಗಿ ಸೆಟೆದು ನಿಂತ ಆ ಕಪ್ಪು ಗಾಜಿನಂತೆಯೇ!

ಹೊಳೆವ ಕಾರಿನ ಆ ಕಪ್ಪು ಗಾಜಿಗಿಂತ
ಮಾಸಿದಂಗಿಯ, ಕೊಳಕು ಕೂದಲ
ಆ ಹುಡುಗಿಯ ಕಣ್ಣಲ್ಲಿ ಹೆಚ್ಚು ಹೊಳಪು
ಮತ್ತೊಮ್ಮೆ ಕಪ್ಪು ಗಾಜಿನ ಪ್ರತಿಬಿಂಬ ಕರೆದಿತ್ತು
ಗಾಜು ತಟ್ಟಲಿಲ್ಲ, ಹೂ ಕೊಳ್ಳೆನ್ನಲಿಲ್ಲ
ಸುಮ್ಮನೆ ತನ್ನನ್ನು ತಾನು ನೋಡುತ್ತಾ ನಿಂತಳು

“ನೀನೆಲ್ಲಾ ನಿನ್ನವ್ವನಂತೆ....", ಕೆಂಪಜ್ಜಿ ಹೇಳಿತ್ತು
ಅರೆ, ಸರಿಯಾಗಿ ನೋಡಲಿಲ್ಲ ಒಳಗೆ
ಅದು ಅಮ್ಮನೇ ಇರಬಹುದೇ?
ಕಣ್ಣಗಲಿಸಿ ಮತ್ತೊಮ್ಮೆ ನೋಡುವಷ್ಟರಲ್ಲಿ
ಹಸಿರು ಸಿಗ್ನಲ್…..
ಛೆ, ಆ ಕಪ್ಪು ಗಾಜು ತನ್ನ ಕೈಲಿದ್ದ
ಕೆಂಪು ಹೂವನ್ನೂ ಪ್ರತಿಬಿಂಬಿಸಬೇಕೆ!

ಎಲ್ಲ ಗಾಡಿಗಳೂ ಹೊರಡಲು ಸಿದ್ಧ
ಗಾಭರಿಗೆ ಹೂಮುಳ್ಳು ಒತ್ತಿ ಹಿಡಿದು
ಹೂ ಜೊತೆಗೆ ಕೈಯೆಲ್ಲ ಕೆಂಪು
ಸುತ್ತಲೂ ನೋಡಿ ಒಮ್ಮೆಲೇ
ಪಕ್ಕದ ಸಿಗ್ನಲ್ ಕಡೆ ಓಡಿದಳು

ಅಲ್ಲೂ ಕಪ್ಪು ಗಾಜಿನೊಳಗೆ ಕಪ್ಪು ಕನ್ನಡಕದ...... 


- ಸಂಪು