Friday, September 3, 2010

'ಇಜ್ಜೋಡು' ಮತ್ತು 'ಸುಚಿತ್ರ' - ಒಂದು ವೀಕ್ ಎಂಡ್ ಅನುಭವ



ಮತ್ತೊಂದು ಸೋಮಾರಿ ವಾರಾಂತ್ಯ ಮತ್ತು ನಾನು, ಕೇಳಬೇಕೆ! ಅಮ್ಮ ಮಾಡಿದ ರುಚಿಕರ ಅಡುಗೆ ಸವಿದು, ಟಿವಿ ನೋಡಹತ್ತಿದ್ದೇ, ಒಳ್ಳೆ ನಿದ್ದೆ ಶುರುವಾಯಿತು. ಸರಿ, ಮತ್ತೆಂತಹ ರಾಜಕಾರಣ ಎಂದು ಮಲಗಿದೆ. ಪವರ್ ಕಟ್ ಆಗಿದೆ, ಬಾಗಿಲು ಧಡ ಧಡ ಯಾರೋ ಬಡಿಯುತ್ತಿದ್ದಾರೆ. ಯಾರೂ? ಕೇಳಿದರೆ ಉತ್ತರವಿಲ್ಲ. ಗಾಬರಿಯಿಂದ ನಾನಿನ್ನೇನು ಬಾಗಿಲು ತೆರೆಯಬೇಕು, ಅಷ್ಟರಲ್ಲಿ "ಸಂಯೂ" ಎಂದು ಅಮ್ಮ ಎಚ್ಚರಿಸಿದಳು. ಉಸ್ಸಪ್ಪ! ಇದು ಕನಸು ಎಂದು ಒಂದು ಕ್ಷಣ ಚೇತರಿಸಿಕೊಂಡೆ. "ಅಪ್ಪ 'ಇಜ್ಜೋಡು' ಗೆ ಹೋಗ್ತಿದಾರೆ ನೀನೂ ಹೋಗ್ತಿಯಾ?" ಅಂದರು. ಸಾಕಷ್ಟು ದಿನಗಳಿಂದ ಕಾದು, ನೋಡಲಾಗದ ಸಿನಿಮಾ ಈಗ ಮತ್ತೆ 'ಸುಚಿತ್ರಾ'ನಲ್ಲಿ ಬಿತ್ತರಗೊಂಡಿತ್ತು. ಇದನ್ನು ತಪ್ಪಿಸಲು ಇದ್ದ ಕಾರಣಗಳನ್ನೆಲ್ಲಾ ಬದಿಗೊತ್ತಿ ತಕ್ಷಣ ತಯಾರಾದೆ. ಭೋ ಎಂದು ಸುರಿಯುತ್ತಿದ್ದ ಜಡಿ ಮಳೆಯಲ್ಲೇ ಸುಚಿತ್ರಾಗೆ ಹೊರಟೆವು.

ಮೆಂಟಲ್ ಮಂಜ, ಚಂಕಾಯ್ಸಿ ಚಿಂದಿ ಉಡಾಯ್ಸಿ, ಇದ್ರೆ ಗೋಪಿ ಬಿದ್ರೆ ಪಾಪಿ, ಪಟ್ರೆ ಲೌಸ್ ಪದ್ಮ (ಅಬ್ಬಾ!) ಇಂತಹ ಜಡ್ಡುಗಟ್ಟಿದ ಸಿನೆಮಾಗಳು, ಅಪ್ಪಿ ತಪ್ಪಿ ಒಂದು ಚೆನ್ನಾಗಿದೆ ಅಂದ್ರೆ ಮತ್ತೆ ಮತ್ತೆ ಅದೇ ಪುನರಾವರ್ತನೆಯಾಗುವ ಮುಂಗಾರು ಮಳೆ, ಮತ್ತೆ ಮುಂಗಾರು, ಮಳೆಯಲಿ ಜೊತೆಯಲಿ ಇತ್ಯಾದಿ! ಈ ವಾತಾವರಣದ ನಡುವೆ ಸದಭಿರುಚಿಯ, ಕಲಾತ್ಮಕವಾದ ಮತ್ತು ಔದ್ದೇಶಿಕ ಚಿತ್ರಗಳು ಬೆರಳೆಣಿಕೆಯವು! ಇಂತಹ ಚಿತ್ರಗಳನ್ನು ನಿರ್ದೇಶಿಸುವವರಲ್ಲಿ ಪದ್ಮಶ್ರೀ ಪುರಸ್ಕೃತ ಎಂ.ಎಸ್ ಸತ್ಯು ಒಬ್ಬರು. ಇವರ ನಿರ್ದೇಶನದ ಇಜ್ಜೋಡು ಚಿತ್ರ ತಪ್ಪಿಸಲಸಾಧ್ಯ ಅಲ್ಲವೇ!

ಇಜ್ಜೋಡು...

ಆನಂದರ 'ನಾ ಕೊಂದ ಹುಡುಗಿ' ಎಂಬ ಕಥೆಯನ್ನು ಆಕರವಾಗಿರಿಸಿ ಈ ಸಿನೆಮಾವನ್ನು ಚಿತ್ರಿಸಲಾಗಿದೆ. ಕಥೆಯಲ್ಲಿ ಮುಖ್ಯವಾಗಿ ದೇವದಾಸಿ ಪದ್ಧತಿಯನ್ನು, ಅದರ ಕರಾಳತೆಯ ಕಿಂಚಿತ್ ಅರಿವೂ ಇಲ್ಲದೆ, ದೈವೀಕ ಎಂದು ನಂಬುವ ಮುಗ್ಧ ಮಾನಿನಿಯರ ಬದುಕನ್ನು ಕನ್ನಡಿಯಾಗಿಸಿದ್ದರೂ, ಅದರ ಜೊತೆಯಾಗಿ ಬದುಕಿನ ಅನೇಕ ಗಂಭೀರ ಒಳಸುಳಿಗಳು ಬಿಂಬಿಸಲ್ಪಟ್ಟಿದೆ.


ಚಿತ್ರ ನಿರೀಕ್ಷಿಸಿದಷ್ಟು ನ್ಯಾಯ ಒದಗಿಸುತ್ತದೆಯೇ, ಅದರ ಮಹತ್ತರ ಉದ್ದೇಶಗಳೆಲ್ಲವೂ ಪ್ರಖರವಾಗಿ ಚಿತ್ರಿತವಾಗಿವೆಯೇ ಎಂಬುದು ಪ್ರಶ್ನಿಸಲ್ಪಡುವ ವಿಷಯವಾದರೂ, ಗಾಂಧೀ ನಗರದ ಇತರ ಬೇಕಾರ್ ಸಿನೆಮಾಗಳಿಗಿಂತ ಸಾಕಷ್ಟು ಭೇಷಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಿನೆಮಾದ ಪ್ರಾರಂಭದಲ್ಲಿ ಒಂದು ನವೀನ ಪ್ರಾಕಾರದ ನೃತ್ಯವನ್ನು ತೋರಿಸಲಾಗಿದೆ. ಅದು ಪ್ರಾಚೀನತೆ ಮತ್ತು ನಾವೀನ್ಯತೆಯ ವೈರುದ್ಧ್ಯ ಬಿಂಬಿಸುವ ಒಂದು ವಿಚಾರ ಹಾಗೂ ಎಂಟರ್ ಟೈನ್ ಮೆಂಟ್ ಆಗಿದೆ. ಕಥೆಯ ಸಾರಾಂಶ ಹೀಗಿದೆ: ಆನಂದ (ಅನಿರುದ್ಧ) ಒಬ್ಬ ಫೋಟೋ ಜರ್ನಲಿಸ್ಟ್. ದೇಶ ವಿದೇಶಗಳಲ್ಲಿ ತನ್ನ ಕ್ಯಾಮೆರಾ ಛಾಪನ್ನು ಮೂಡಿಸಿರುತ್ತಾನೆ. ಪ್ರಸ್ತುತ ಹಳೆಯ, ಪಾಳುಬಿದ್ದ ದೇವಸ್ಥಾನಗಳನ್ನು, ಅದರಲ್ಲಿ ಅಡಗಿರುವ ಶಿಲ್ಪಕಲಾ ಪ್ರಬುದ್ಧತೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಉದ್ದೇಶದಿಂದ ಒಂದು ಹಳ್ಳಿಗೆ ಬಂದಿರುತ್ತಾನೆ. ದಾರಿಯಲ್ಲಿ ತನ್ನ ಜೀಪ್ ಕೆಟ್ಟು ಹೋಗಿ ಆ ಪ್ರಾಂತ್ಯದ ಒಬ್ಬನ ಸಹಾಯದ ಮೂಲಕ ಆ ಊರಿನ ಪಟೇಲನ ಮನೆ ಸೇರುತ್ತಾನೆ.

ಆ ಪಟೇಲನ ಮಗಳು ಚೆನ್ನಿ (ಮೀರಾ ಜಾಸ್ಮಿನ್). ಇವಳ ಸೌಂದರ್ಯ, ಮೋಹಕತೆ, ಸೌಮ್ಯತೆಗಳಿಗೆ ಆನಂದ ಮಾರುಹೋಗುತ್ತಾನೆ. ಅವಳ ಬಗೆಗಿನ ಅದೇ ಆಕರ್ಷಣೆ ಅವನನ್ನು ಭ್ರಾಂತಿಗೊಳಿಸಿ ಪದೇ ಪದೇ ಅವಳನ್ನೇ ಸ್ಮರಿಸುವಂತಾಗುತ್ತದೆ. ಎಷ್ಟರಮಟ್ಟಿಗೆಂದರೆ, ಆತ ಹೋದಲೆಲ್ಲಾ ಚೆನ್ನಿ ಕಾಣುತ್ತಾಳೆ, ಮಾತಾಡುವಷ್ಟರಲ್ಲಿ ಮಾಯವಾಗುತ್ತಾಳೆ. ಆದರೆ, ಆ ಊರಿನ ಒಬ್ಬ ಹುಚ್ಚನಿಂದ ಮತ್ತು ಅನೇಕರಿಂದ ಅವಳ ಬಗೆಗಿನ ಏನೋ ಮಾರ್ಮಿಕ ವಿಚಾರವಡಗಿದೆ ಎಂದು ಕುತೂಹಲನಾಗುತ್ತಾನೆ.

ಚೆನ್ನಿಯೊಡನೆ ಸ್ನೇಹ, ಮಾತು ಹೆಚ್ಚಾಗಿ, ಆಕೆಯಿಂದಲೇ ಊರಿನ ಹುಚ್ಚನ ಕಥೆಯನ್ನು ಅರಿಯುತ್ತಾನೆ. ಆ ಹುಚ್ಚ ಒಂದು ಕಾಲದಲ್ಲಿ ಯೋಧ, ಆತನ ಹೆಂಡತಿ ಕೆಂಪಿ, ಸುಂದರಿ. ಮದುವೆಯಾದ ಒಂದೇ ತಿಂಗಳಿಗೆ ಆತನಿಗೆ ಸೈನ್ಯದಿಂದ ಬುಲಾವ್ ಬಂದು ಹೊರಡುತ್ತಾನೆ. ಸಾಕಷ್ಟು ಕಾಲ ಹಿಂದಿರುಗುವುದಿಲ್ಲ, ಕೊನೆಗೊಮ್ಮೆ ಆತ ವಿಧಿ ವಶನಾಗಿರುವುದು ತಿಳಿಯುತ್ತದೆ. ಕಾಲಾಯುಗತ ಆತನ ಹೆಂಡತಿ ಕೆಂಪಿ ತನ್ನನ್ನು ಮೋಹಿಸಿದ್ದ, ತನಗಿಂತಲೂ ಕಿರಿಯನಾದವನನ್ನು ಊರ ಸಮ್ಮತಿಯಿಂದಲೇ ವರಿಸುತ್ತಾಳೆ. ಕೆಲ ಕಾಲದ ನಂತರ ಕೆಂಪಿ ತುಂಬು ಗರ್ಭಿಣಿ, ಆಗ ಈ ಯೋಧ ಮರಳಿ ಬರಬೇಕೆ! ಕೆಂಪಿಯ ವಿಷಯವರಿತು ಆಘಾತಗೊಂಡು ಅರೆ ಹುಚ್ಚನಾಗುತ್ತಾನೆ. ಈ ವಿಚಾರ ತಿಳಿದ ಆನಂದ ಆ ಹುಚ್ಚನ ಬಗ್ಗೆ ಮರುಕ ಪಡುತ್ತಾನೆ.

ಹೀಗೆ ದಿನ ಕಳೆಯಲು, ಒಮ್ಮೆ ಆನಂದನಿಗೆ ಚೆನ್ನಿಯ ಬಗೆಗಿನ, ಆತನಿಗೆ ಇಷ್ಟು ದಿನ ಕಾಡಿದ್ದ ಮರ್ಮ ಬಗೆ ಹರಿಯುತ್ತದೆ. ಚೆನ್ನಿ ಒಬ್ಬ ದೇವದಾಸಿ ಎಂಬ ಸತ್ಯ ತಿಳಿಯುತ್ತದೆ. ಊರ ಶಾಂತಿ ಉಳಿಸಲು ಪಟೇಲ ತನ್ನ ಮಗಳು ಚೆನ್ನಿಯನ್ನೇ 'ಬಸವಿ' ಮಾಡಿರುತ್ತಾನೆ. ಚೆನ್ನಿ ಭಕ್ತಿಯಿಂದ, ಇದು ದೇವರ ಕೆಲಸ ಎಂದೇ ನಂಬಿ ವರ್ಷಗಳಿಂದ ಬದುಕಿರುತ್ತಾಳೆ. ಈ ವಿಷಯವರಿತ ಆನಂದ ಖೇದನಾಗಿ, ಆಕೆಯ ಮೇಲೆ ಜರುಗುತ್ತಿರುವುದು ದೌರ್ಜನ್ಯವೆಂದೂ, ಅದು ಅಂಧತ್ವ, ಶೋಷಣೆ ಎಂದೂ ಆಕೆಗೆ ತಿಳಿಹೇಳುತ್ತಾನೆ. ಆಕೆಯ ನಂಬಿಕೆಗಳ ಭದ್ರ ಬುನಾದಿಯನ್ನು ಒಡೆದು ಚೂರು ಮಾಡುತ್ತಾನೆ. ಚೆನ್ನಿಗೆ ಮೊಟ್ಟ ಮೊದಲನೇ ಬಾರಿ ತಾನು ಮಾಡುತ್ತಿರುವುದು ತಪ್ಪು ಎಂಬ ಅರಿವಾಗುತ್ತದೆ. ತಾನು ಮಾಡಿದ ಕಾರ್ಯವೆಲ್ಲ ನಿಕೃಷ್ಟ ಎಂದು ತತ್ತರಿಸುತ್ತಾಳೆ. ಆನಂದ ಚೆನ್ನಿಗೆ, ಕೆಂಪಿಯಂತೆ ತಾನೂ ಹೊಸ ಬಾಳನ್ನು ಪ್ರಾರಂಭಿಸಲು ಬೋಧಿಸುತ್ತಾನೆ. ಆಗ ಚೆನ್ನಿ ಆನಂದನಿಂದಲೇ ಆ ಹೊಸ ಬಾಳನ್ನು ಬಯಸುತ್ತಾಳೆ. ಆದರೆ ಆನಂದನಿಗೆ ಅದು ಸಾಧ್ಯವಾಗದು. ತನ್ನ ಮಾತುಗಳಷ್ಟೇ ಸುಲಭವಾಗಿ ಹೇಳಿಕೆಯನ್ನು ಆಚರಿಸಲಾಗದು ಎಂಬುದು ಇಬ್ಬರಿಗೂ ಅರಿವಾಗುತ್ತದೆ. ಬೆಳಗಾಗುವಷ್ಟರಲ್ಲಿ ಚೆನ್ನಿ ಆತ್ಮ ಹತ್ಯೆ ಮಾಡಿಕೊಂಡಿರುತ್ತಾಳೆ. ಆನಂದ ಪಾಪ ಪ್ರಜ್ಞೆಯಿಂದ ಉಳಿದು ಕೊಳ್ಳುತ್ತಾನೆ.

ಆನಂದನ ನಡವಳಿಕೆಯಿಂದ ನುಡಿದಂತೆ ನಡೆಯುವುದು ಸತ್ಯವಾಗಿ ಬದುಕುವುದು ಎಷ್ಟು ಕಠಿಣ ಎಂಬುದರ ಅರಿವಾಗುತ್ತದೆ. ನಮ್ಮೆಲ್ಲರ ಬದುಕಿನಲ್ಲೂ ಎಷ್ಟೋ ಸಂಧರ್ಭಗಳಲ್ಲಿ ಹೀಗೆಯೇ ನಡೆದಿರಲು ಸಾಧ್ಯ. ಚೆನ್ನಿಯ ಬಲವಾದ ನಂಬಿಕೆಗಳು ಮುರಿದು, ಆಕೆಯ ಮುಗ್ಧತೆ ಒಡೆದು ಚೂರಾದಾಗ ಅವಳಿಗಾದ ಆಘಾತ ತಡೆಯಲಾಗದು. ಜೀವನದಲ್ಲಿ ನಂಬಿಕೆಗಳ ಪಾತ್ರ ಎಷ್ಟು ಹಿರಿಯದು ಎಂಬುದನ್ನು ಈ ಸನ್ನಿವೇಶ ಎತ್ತಿ ತೋರಿಸುತ್ತದೆ. ಕೆಂಪಿಯ ಮದುವೆಗೆ ಊರ ಜನರೆಲ್ಲಾ ಸಮ್ಮತಿ ನೀಡುತ್ತಾರೆ, ಆ ಊರ ಹುಡುಗ, ಕೆಂಪಿಗಿಂತಲೂ ಕಿರಿಯವ ಆಕೆಯನ್ನು ಮದುವೆಯಾಗುತ್ತಾನೆ. ಆದರೆ ಅದೇ ಕೆಲಸ ಹೆಚ್ಚು ವೈಚಾರಿಕತೆಯುಳ್ಳ, ವಿದ್ಯೆಯುಳ್ಳ, ನಗರದವನಾದ ಆನಂದನಿಗೆ ಸಾಧ್ಯವಾಗದು! ಇವೆಲ್ಲ, ಮನುಷ್ಯನ ಆಲೋಚನೆಗಳ ಸ್ಥಿತಿ-ಮಿತಿ, ಕ್ಯಾಪಿಟಲಿಸ್ಟ್ ಗಳಾದ ನಗರದವರು ಹಳ್ಳಿಯ ಮುಗ್ಧರಿಗಿಂತ ಸಂಕುಚಿತ ಮನೋಭಾವದವರಾಗಿದ್ದಾರೆ ಎಂಬ ವಾಸ್ತವಿಕತೆಗಳನ್ನು ಬಿಂಬಿಸುತ್ತದೆ.

ಒಟ್ಟಾರೆ, ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕಾಣಸಿಗುವುದು: ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಇವುಗಳ ಬಗ್ಗೆ ಬೆಳಕು, ಮನಸ್ಸಿನ ನಂಬಿಕೆ – ನಿರ್ಧಾರ - ದ್ವಂದ್ವಗಳ ಮನೋವಿಜ್ಞಾನ, ಬಡವರ ಪರ ದನಿಯೆತ್ತುವ ಮಾರ್ಕ್ಸ್ ವಾದ, ಹೊಸ ಚಿಗುರು- ಹಳೆ ಬೇರಿನ ಮೇಳೈಕೆ, ಸ್ತ್ರೀವಾದದ ಸವರಿಕೆ ಮತ್ತು ಸುಂದರವಾದ ಸ್ಥಳಗಳು ಹಾಗೂ ಕ್ಯಾಮೆರಾ ಕಣ್ಣು!

ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಸಾಧಾರಣ ನಡೆಯುವಂತೆ ಚಿತ್ರೋತ್ತರ ಚರ್ಚೆಯಿತ್ತು. ಸತ್ಯು ಅವರ ಜೊತೆಗಿನ ಮುಲಾಕಾತ್ ನ ಭಾಗ್ಯ ನಮ್ಮದಾಗಿತ್ತು. ಸಿನಿಮಾದ ಚರ್ಚೆಯಿಂದಲೇ ತಿಳಿದದ್ದು, ‘ಇಜ್ಜೋಡು’ ಎಂದರೆ ಜೋಡಿಯಾಗದೆ ಇರುವುದು ಎಂದು. ಇದು ಆನಂದ ಮತ್ತು ಚೆನ್ನಿಯ ಇಜ್ಜೋಡಿನ ಕಥೆ. ಇಜ್ಜೋಡು ಎಂಬ ಪದ ವಿ.ಕೃ ಗೋಕಾಕರ ಕಥೆಯಲ್ಲಿ ಪ್ರಯೋಗವಾಗಿದೆ ಎಂದು ಸತ್ಯು ಸರ್ ಮೂಲಕ ತಿಳಿಯಿತು.

ಸಿನಿಮಾ ಬಗೆಗಿನ ಚರ್ಚೆ ಸಾಕಷ್ಟು ಲವಲವಿಕೆಯಿಂದಿತ್ತು. ನಿಜ ಹೇಳಬೇಕೆಂದರೆ, ಸತ್ಯು ಸರ್ ಗಿಂತ ಹೆಚ್ಚು ನನ್ನ ಗಮನ ಸೆಳೆದದ್ದು ಸಿನೆಮಟೋಗ್ರಾಫೆರ್ ಭಾಸ್ಕರ್ ರವರು. ಸರಳ, ಸಂಕೋಚ ಸ್ವಭಾವದ ಅವರು ತುಂಬು ನಗೆಯಿಂದ ಎಲ್ಲಾ ಪ್ರಶ್ನೆಗಳನ್ನೂ ಗ್ರಹಿಸಿ, ಅದಕ್ಕೆ ಸಮಾಧಾನದಿಂದ ಸೂಕ್ತ ಉತ್ತರಗಳನ್ನು ನೀಡುತ್ತಿದ್ದರು. ಅವರ ಜ್ಞಾನ ಅನುಭವಗಳು, ಅವರ ಹಾವಭಾವಗಳಿಂದಲೇ ಬಿಂಬಿತವಾಗಿತ್ತು. (ಭಾಸ್ಕರ್ ಸರ್, ಸಾಧ್ಯವಾದಲ್ಲಿ ನಿಮ್ಮನ್ನೊಮ್ಮೆ ಖುದ್ದಾಗಿ ಭೇಟಿ ಮಾಡುವ ಹಂಬಲ).
ಅಂತು, 'ಇಜ್ಜೋಡು' ಮತ್ತು 'ಸುಚಿತ್ರ' ಒಂದು ಒಳ್ಳೆಯ ಅನುಭವ ಮತ್ತು ವೀಕ್ ಎಂಡ್ ಅನ್ನು ವೇಸ್ಟ್ ಮಾಡಲಿಲ್ಲ ಎಂಬ ಸಮಾಧಾನ!

10 comments:

ಭಾಶೇ said...

Hmmm.... so you wrote this at last.

Nice way of narration dear.

sunaath said...

ಕನಸು,
ಸಣ್ಣದೊಂದು ಮಿಸ್ಟೇಕ್ ಇಲ್ಲಿದೆ. ‘ನಾನು ಕೊಂದ ಹುಡುಗಿ’ ಕತೆಯನ್ನು ಬರೆದವರು ಆನಂದಕಂದರಲ್ಲ(=ಬೆಟಗೇರಿ ಕೃಷ್ಣಶರ್ಮ.)ಆದರೆ ಆನಂದ ಎನ್ನುವ ಕತೆಗಾರರು(=ಏ.ಸೀತಾರಾಮ).
‘ಇಜ್ಜೋಡು’ಇದು ಕತೆಯಲ್ಲ; ಸಮರಸವೇ ಜೀವನ ಎನ್ನುವ ಕಾದಂಬರಿಯ ಒಂದು ಭಾಗ.

kanasu said...

ಒಹ್ ಕ್ಷಮಿಸಿ ಕಾ ಕಾ
ತಿಳಿಸಿದ್ದಕ್ಕಾಗಿ ಧನ್ಯವಾದಗಳು :)

htmlreminder said...

One of the worst movies I have ever seen. Watched it without any kind of expectation and yet it was disappointing! We don't need to see this movie to learn or know about Devadasis and cinematic techniques were "thopu!"

pradeep said...

ಹೌದು..ನಿಮ್ಮ ನಿರೂಪಣೆ ಸೊಗಸಾಗಿದೆ

ನಿಮ್ಮ ಭಾಸ್ಕರ್ ಸರ್ ನೊಂದಿಗಿನ ಭೇಟಿಯ ಲೇಖನ ಬೇಗ ಮೂಡಿಬರಲಿ...

kanasu said...

@ htmlreminder: Lokobhinnaruchihi!

@ Pradeep: Thank you :)

shridhar said...

Movie Nodalu agilla .. aadare tarevaari vimarshegalannu keliddene .

nija neevu helidante .. Lokobinnaaruchihi ..

nimma narration chennagide .sadya aadre omme movie nodbeku .

kanasu said...

Thank you shridhar..

Venkatesha Murthy said...

chennagide narration...

kanasu said...

Thanks venki!