Wednesday, July 7, 2010

ಫ್ರಾಸ್ಟ್ ನ ಕಾವ್ಯದ ‘ಸಂದರ್ಭಾಧಾರಿತ ಭಾವ’ - ಒಂದು ವಿಶ್ಲೇಷಣೆ



"ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆ ರಸಿಕ ನಿನಗೆ...", ಬೇಂದ್ರೆಯವರ ಈ ಸಾಲುಗಳು ಜನಪ್ರಿಯ ಅಮೆರಿಕನ್ ಕವಿ ರಾಬರ್ಟ್ ಫ್ರಾಸ್ಟ್ ಗೆ ಅತಿ ಸೂಕ್ತವಾಗಿ ಅನ್ವಯಿಸುತ್ತವೆ. ಈತ ಆಧುನಿಕ ಕವಿಗಳಾದ ಟಿ. ಎಸ್. ಎಲಿಯಟ್, ಎರ್ಜಾ ಪೌಂಡ್ ರವರ ಸಮಕಾಲೀನರಾಗಿದ್ದರೂ ಆಧುನಿಕ ಹಾಗೂ ಟ್ರೆಡಿಶನಲ್ ಕಾವ್ಯದ ಮಿಳಿತದಿಂದ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಫ್ರಾಸ್ಟ್ ನ ವಯಕ್ತಿಕ ಜೀವನ ಅತ್ಯಂತ ಕಷ್ಟಕರವೂ ಹಾಗೂ ವಿಷಾದದಿಂದ ಕೂಡಿದುದೂ ಆಗಿತ್ತು. ಬಹುಷಃ ಅವರ ಇದೇ ಅನುಭವಸಿರಿಯು, "ಅನುಭವದ ಪಾಲೊಳು ವಿಚಾರ ಮಂಥನವಾಗೆ ಜನಿಯಿಕುಂ ಜ್ಞಾನ ನವನೀತವದೆ ಸುಖದಂ" ಎಂಬಂತೆ ಅನುಭವದ ಹಿನ್ನೆಲೆಯಲ್ಲಿ ಮತ್ತಷ್ಟು ಅನುಭಾವತೆಯ ಅವಲೋಕನ ಸೇರಿದರೆ ಉಂಟಾಗುವ ಚಮತ್ಕಾರವೇ ಫ್ರಾಸ್ಟ್ ನ ಕಾವ್ಯ! ಇದೇ ಕಾವ್ಯ ಸಂಪತ್ತು ಅವರಿಗೆ ನಾಲ್ಕು ಬಾರಿ ಪುಲಿಟ್ಜ್ಯರ್ ಪ್ರಶಸ್ತಿಯನ್ನು ದಕ್ಕಿಸಿದೆ.

ಇನ್ನು ಫ್ರಾಸ್ಟ್ ನ ಕಾವ್ಯದೆಡೆಗೆ ವಿಹರಿಸೋಣ. ಇವರ ಕಾವ್ಯವು ಎಂದಿಗೂ ಕಲೆಗೆ ದನಿಕೊಡಿಸುವ, ಜೀವಂತವಾಗಿಸುವ ಕನಸಾಗಿತ್ತು. ಮೊದಲ ಓದಿಗೆ ಅತಿ ಸರಳವಾಗಿ ಕಾಣುವ ಇವರ ಬರಹಗಳು, ಆಂತರ್ಯದ ಒಳಹೊಕ್ಕು ನೋಡಿದಾಗ, ಬಾಳಿನರ್ಥದ ವೇದಾಂತ, ತಾತ್ವಿಕತೆಗಳ ಮಜಲುಗಳನ್ನು ಬಿಡಿಸುವ ಆಳ ಮತ್ತು ಗಾಂಭೀರ್ಯತೆಗಳನ್ನು ಹೊಂದಿರುತ್ತವೆ. ಅಷ್ಟೇ ಅಲ್ಲದೆ, ಫ್ರಾಸ್ಟ್ ನ ಕಾವ್ಯದ ಮತ್ತೊಂದು ಕೌತುಕ, ಅವರ ಪದ್ಯಗಳ 'ಓಪನ್ ಎನ್ ಡೆಡ್ ನೆಸ್ಸ್' ಅಥವಾ ನಾನಾ ವ್ಯಾಖ್ಯಾನ ಸಾಧ್ಯತೆ. ಫ್ರಾಸ್ಟ್ ನೇ ಹೇಳಿರುವಂತೆ ತನ್ನ ಕಾವ್ಯವು ‘ಕಾನ್ ಟೆಕ್ಸ್ಟ್ ಬೇಸ್ಡ್’, ಅಂದರೆ ಸಂದರ್ಭಾನುಸಾರವಾಗಿ ಹಾಗೂ ವಿಷಯಾಧಾರಿತವಾಗಿರುತ್ತದೆ.

ಈ ಮೇಲ್ನುಡಿಯನ್ನು ಅರ್ಥೈಸಲು ಒಂದೆರಡು ಉದಾಹರಣೆಗಳನ್ನು ಗಮನಿಸೋಣ: ಫ್ರಾಸ್ಟ್ ನ “Stopping by the Woods on a Snowy Evening” ಹಾಗೂ “Desert Places”. ಈ ಎರಡೂ ಪದ್ಯಗಳೂ ಒಂದೇ ಪರಿಸರದಲ್ಲಿ ಮೂಡಿಬಂದಿವೆ. ಎರಡೂ ಹಳ್ಳಿಗಾಡಿನ ಹಿನ್ನೆಲೆಯಲ್ಲೇ ರಚಿತವಾಗಿದ್ದು, ಎರಡರಲ್ಲೂ ಒಂದೇ ವಿಧವಾದ ನಿಶ್ಚಲತೆ, ಚಳಿಗಾಲದ ಸಂಜೆಗತ್ತಲು ಹಾಗೂ ಹಿಮದ ಸನ್ನಿವೇಶ ತುಂಬಿರುತ್ತದೆ. ಆದರೆ ಕುತೂಹಲವೆಂದರೆ ಅದೆರಡೂ ತದ್ವಿರುದ್ಧ ಭಾವಗಳನ್ನು ಹೊಂದಿವೆ. ಒಂದೇ ವಾತಾವರಣ, ಒಂದೇ ದೃಶ್ಯ ಕವಿಯ ಮನಸ್ಸಿಗೆ, ಭಾವನೆಗೆ ಅನುಸಾರವಾಗಿ ಎರಡು ವಿಭಿನ್ನ ಸಿದ್ಧಾಂತಗಳನ್ನು ಸಂಕೇತಿಸುತ್ತವೆ. ಇಲ್ಲಿ ನಾವು ಕಾವ್ಯದ ಸ್ವಭಾವತಃ ಬಹುರೂಪ ಸಾಧ್ಯತೆ ಹಾಗೂ ಅದರ ಎಲ್ಲೆ ಇರದ ಸ್ವಾತಂತ್ರ್ಯವನ್ನು ಕಾಣಬಹುದು.

“Stopping by the Woods” ಪದ್ಯವು ಚಳಿಗಾಲದ ಹಿಮಭರಿತ ಸಂಜೆಗತ್ತಲಿನ, ಕಾಡದಾರಿಯಲ್ಲಿ ಆರಂಭಗೊಳ್ಳುತ್ತದೆ. ಕುದುರೆಯನೇರಿದ ದಾರಿಹೋಕ (ಕವಿ) ನೊಬ್ಬ ನಡುವೆ ಕಂಡ ಕಾಡನ್ನು, ಅದರ ಮನೋಹರ ದೃಶ್ಯವನ್ನು ರಮಿಸುತ್ತಾ ಅಲ್ಲೇ ನಿಲ್ಲುತ್ತಾನೆ. ಹಿಮದಿಂದ ಮುಳುಗುತ್ತಿರುವ ಆ ಕಾಡು ಯಾರದೆಂಬುದನ್ನು ಆತ ಅರಿತಿರುತ್ತಾನೆ. ಆ ಗೊಂಡಾರಣ್ಯ ಮತ್ತು ಮಂಜಿನಿಂದ ಹೆಪ್ಪುಗಟ್ಟಿದ ಸರೋವರದ ಸೌಂದರ್ಯವನ್ನು ನೋಡುತ್ತಾ ಕಳೆದು ಹೋಗಿದ್ದ ಆತನಿಗೆ, ತನ್ನ ಕುದುರೆಯೇನೆಂದುಕೊಳ್ಳುತ್ತದೆಯೋ ಎಂಬ ಅನುಮಾನ. ಅದ್ಭುತವಾದ, ಮಾರ್ಮಿಕವಾದ, ಸೆಳೆಯುವ ಆ ಕಾಡನ್ನು ಆನಂದಿಸುತ್ತಿದ್ದ ಆತನಿಗೆ ಥಟ್ಟನೆ ಹೊಳೆಯುವುದು ತನ್ನ ಲೌಕಿಕ ಬದುಕಿನ
ಜವಾಬ್ದಾರಿಗಳು. "Miles to go before I sleep, miles to go before I sleep”, ಎಂದು ಹೇಳಿ ಹೊರಡುತ್ತಾನೆ.

ಈ ಪದ್ಯವನ್ನು ಕೂಲಂಕುಶವಾಗಿ ಅವಲೋಕಿಸಿದರೆ, ಕವಿ ಕಂಡ ಕಾಡು ಜೀವನದಾಚೆಯ, ಪರಲೋಕವನ್ನು ಸಂಕೇತಿಸುತ್ತದೆ. ಅದು ಕವಿಯನ್ನು ಬಹಳಷ್ಟು ಆಕರ್ಷಿಸುತ್ತದೆ. ಇದು ಆತ್ಮಹತ್ಯೆಯ ಅಭಿಲಾಷೆಯೂ ಆಗಿರಬಹುದು. ಸಮಾಜದ ಸಂಕೇತವಾಗಿರುವ ತನ್ನ ಕುದುರೆಯ ವರ್ತನೆಯನ್ನು ಕಂಡು, ಇವನ ಮನದಿಂಗಿತವು ಎಲ್ಲಿ ನಗೆಪಾಟಲಾಗುವುದೋ ಎಂದು ಹೆದರುತ್ತಾನೆ. ಆ ಮರಣದ ಭಾವಾತೀತ ಅನುಭವ, ಆ ಚಿರನಿದ್ರೆ, ಪ್ರಶಾಂತತೆ ಅವನನ್ನು ಕಾಡಿದರೂ, ತನಗೆ ತನ್ನ ಬದುಕು, ಜವಾಬ್ದಾರಿಗಳು, ಸಂಬಂಧಗಳು ನೆನಪಾಗಿ, ಜೀವನದಲ್ಲಿ ತಾನು ಸಾಧಿಸುವುದು ಸಾಕಷ್ಟಿದೆ ಎಂದರಿತು, ಹೊರಡಲೇ ಬೇಕು ಎಂಬ ಧೃಡ ನಿರ್ಧಾರಕ್ಕೆ ಬರುತ್ತಾನೆ. ಈ ಅನಿಸಿಕೆ ಆತನ ಜವಾಬ್ದಾರಿಯುತ, ಸಂತಸದ ಬದುಕನ್ನು ಹಿಂಪಡೆಯುವ ಆಶಯ ಮತ್ತು ನಿರೀಕ್ಷೆಗಳಿಂದ ಕೂಡಿದೆ. ಈ ಪದ್ಯವನ್ನು ಮತ್ತೊಂದು ರೀತಿ ವ್ಯಾಖ್ಯಾನಿಸಿದರೆ, ಸುಖದ, ಬೇಜವಾಬ್ದಾರಿತನಗಳ, ಪಲಾಯನವಾದದ ಬದುಕನ್ನು ಕವಿ ಆಶಿಸಿದರೂ ಹಿಮ್ಮೆಟ್ಟಿ ಛಲದಿಂದ ಬದುಕಿನ ಸವಾಲುಗಳನ್ನು ಎದುರಿಸಲು ಮುಂದಾಗುತ್ತಾನೆ. ಈ ಪರಿಯ, 'ದೃಷ್ಟಿಯಂತೆ ಸೃಷ್ಟಿ' ಎಂಬಂತೆ ಚಿತ್ರಣ ಸಾಮರ್ಥ್ಯ ಫ್ರಾಸ್ಟ್ ನದು.

“Desert Places” ನ ನಿರ್ವಿಣ್ಣತೆ, ಭೀಕರತೆಗಳು ಪ್ರಾರಂಭಗೊಳ್ಳುವುದು ಸಹ ಅದೇ ಚಳಿಗಾಲದ ಹಿಮ ಸಂಜೆಯಿಂದಲೇ. ಚಳಿಗಾಲದ ಹಿಮಭರಿತ ಸಂಜೆಗತ್ತಲು, ಕಾಡದಾರಿ. ದಾರಿಹೋಕ ಈ ದೃಶ್ಯವನ್ನು ವೀಕ್ಷಿಸುತ್ತಿದ್ದಾನೆ. ನೆಲವೆಲ್ಲಾ ಹಿಮದಿಂದ ಆವೃತಗೊಂಡಿದೆ. ಆದರೆ ಕೆಲವೇ ಮರದ ದಿಮ್ಮಿಗಳು, ಆ ದಿಮ್ಮಿಗಳ ನಡುನಡುವೆ ಕಾಣುತ್ತಿರುವ ಕಳೆ. ಪ್ರಾಣಿಗಳೆಲ್ಲಾ ಅವುಗಳ ಗೂಡುಗಳೊಳಗೆ ಬಚ್ಚಿಟ್ಟುಕೊಂಡಿವೆ. ಈ ದಾರಿಹೋಕ ತಾನೊಬ್ಬೊಂಟಿಗ. ಆ ನಿರ್ಜನತೆ, ನಿಶ್ಚಲ ಕಾಡು, ಬಿಳಿ ಹಿಮ ನೋಡುತ್ತಾ ಆ ವ್ಯಕ್ತಿಗೆ ಮತ್ತಷ್ಟು ಒಂಟಿತನ ಕಾಡುತ್ತದೆ. ಇದರಲ್ಲಿ ಕವಿ ಕಾಣುವುದೆಲ್ಲಾ ದುಗುಡ, ಶೂನ್ಯತೆ ಮತ್ತು ಖಿನ್ನತೆ. ತನ್ನ ಜೀವನದ ಕಷ್ಟಗಳಿಂದ ದುಃಖಿತನಾದ ಕವಿ ಅದನ್ನೇ ಪ್ರಕೃತಿಯಲ್ಲಿ ಕಾಣುತ್ತಾನೆ. ಆದರೂ ಈ ಭಯಾನಕ ಪರಿಸರ ತನ್ನನ್ನು ಭಯಪಡಿಸಲಾರದು ಏಕೆಂದರೆ ಭಯಪಡಲು ತನ್ನದೇ ಆದ ತನ್ನೊಳಗಿನ ಮರುಭೂಮಿ ಸ್ಥಳಗಳಿವೆ" ಎಂದು ನುಡಿಯುತ್ತಾನೆ.

ಈ ಕವನವು ಕವಿಯ ಋಣಾತ್ಮಕ ಮನಸ್ಥಿತಿಯನ್ನು ಬಿಂಬಿಸುತ್ತದೆ. ಕವಿಯು ಆ ಭಯಗ್ರಸ್ಥ ವಾತಾವರಣದಲ್ಲಿ ಭಯದ ಭ್ರಮೆಗೊಳಗಾದರೂ ಭಯಪಡಲಾರ. ಏಕೆಂದರೆ ಅವನ ಒಳಗಣ ಮಾನಸಿಕ ನೋವು ಈ ಎಲ್ಲಾ ಒಂಟಿತನ, ಹತಾಶೆಗೆ ಮೀರಿದ್ದು. ಕವಿ ಹೇಳುತ್ತಾನೆ ತನ್ನ ಮಾನಸ ಸರೋವರವು ಬತ್ತಿ ಹೋಗಿ ಒಂದು ಒಣ ಮರುಭೂಮಿಯಾಗಿದೆ ಎಂದು. ಇದರಿಂದ ನಾವು ಮನಶಾಸ್ತ್ರದ ಒಳಸುಳಿಗಳನ್ನು, ನಮ್ಮ ಜೀವನದ ಅನುಭವಗಳು ಮನಸಿನ ಮೇಲೆ ಬೀರುವ ಪ್ರಭಾವಗಳನ್ನು ಅರಿಯಬಹುದು. ಘಾಸಿಗೊಂಡ ಮನಸಿನ ಆಂತರಿಕ ಕಂಪನಗಳನ್ನು ಅತ್ಯಂತ ಸಂವೇದನಾಶೀಲವಾಗಿ ಬಿಂಬಿಸುವುದು ಫ್ರಾಸ್ಟ್ ನ ಕಲಾತ್ಮಕತೆಯ ಪ್ರತೀಕ.

ನಮ್ಮ ನೋಟ, ವಿಚಾರಗಳು ನಮ್ಮ ಅನುಭವದಿಂದ ಆವೃತವಾಗಿರುತ್ತದೆ ಎಂಬುದಕ್ಕೆ ಈ ಎರಡು ಪದ್ಯಗಳು ಸಾಕ್ಷಿಯಾಗಿವೆ. ಇದೇ ಪ್ರಸಂಗ ಹಾಗೂ ಅನುಭವಗಳ ಪುಟಗಳನ್ನು ತಿರುವುತ್ತಿದ್ದ ನನಗೆ ನೆನಪಾದುದು ಬೇಂದ್ರೆಯವರ ಈ ಎರಡು ಸಾಲುಗಳು; "ಬಿದಿಗಿ ಚಂದ್ರನ ಚೊಗಚಿ ನಗಿ ಹೂ...." ಮತ್ತು " ಹುಣ್ಣಿಮಿ ಚಂದಿರನ ಹೆಣ ಬಂತು ಮುಗಿಲಾಗ ತೇಲುತಾ ಹಗಲಾ....". ಎರಡರಲ್ಲೂ ಕವಿ ಕಂಡದ್ದು ಚಂದ್ರನನ್ನೇ. ಆದರೆ ಅದನ್ನು ಕಂಡ ಸಂದರ್ಭ, ಪ್ರಸಂಗಗಳು ಬೇರೆ ಬೇರೆಯದಾಗಿತ್ತು!

ಹೀಗೆ ಫ್ರಾಸ್ಟ್ ನ ಕವಿತೆಯು ಸಂಧರ್ಭಾಧಾರಿತ ಭಾವವನ್ನು ಹೊಂದಿರುತ್ತದೆ. ಮತ್ತೆ ಮತ್ತೆ ಹತಾಶೆಯ, ಆಶೆ-ನಿರೀಕ್ಷೆಯ ತುಡಿತದಿಂದ ಈಜುತ್ತದೆ. ಈತನ ಮತ್ತೊಂದು ಅತ್ಯಂತ ಚಮತ್ಕಾರೀ ಪದ್ಯವೆಂದರೆ, “Dust of Snow”. ಇದು ಅತ್ಯಂತ ಸಾಧಾರಣವಾಗಿ ಕಾಣುವ, ಎಂಟೇ ಸಾಲಿನ ಅತಿ ಚಿಕ್ಕ ಪದ್ಯ. ಆದರೆ ಇದರಲ್ಲೂ ಕವಿ ದುಃಖವನ್ನು (ಅಥವಾ ಸಾವನ್ನು) ಹಿಮ್ಮೆಟ್ಟಿ ಜೀವನ ಪ್ರೀತಿಗೆ ಮರಳುತ್ತಾನೆ. ಬದುಕಲು ಒಂದು ಹೊಸ ಹುರುಪನ್ನು, ಮರುಜನ್ಮವನ್ನು ಪಡೆಯುತ್ತಾನೆ. ಈ ರೀತಿಯ ತನ್ನ ಅನುಭವಗಳನ್ನು ಕಾವ್ಯಧಾರೆಯ ರಸವಾಗಿಸುವ ಅತ್ಯಂತ ಯಶಸ್ವೀ ಕವಿಗಳಲ್ಲಿ ಫ್ರಾಸ್ಟ್ ಒಬ್ಬನಾಗುತ್ತಾನೆ. ಕಾವ್ಯದಲ್ಲಿ ತನ್ನ ಅನುಭವ - ವಿಷಯಗಳೊಂದಿಗೆ ಸಾಂಕೇತಿಕತೆ ಮತ್ತು ಪ್ರತಿಮಾವಿಧಾನಗಳ ಪ್ರಯೋಗದಿಂದ ನಮ್ಮನ್ನು ರೋಮಾಂಚನಗೊಳಿಸುತ್ತಾನೆ.

8 comments:

ಸಾಗರದಾಚೆಯ ಇಂಚರ said...

ತುಂಬಾ ತುಂಬಾ ಸುಂದರ ಬರಹ

sunaath said...

ಕನಸು,
ರಾ^ಬರ್ಟ್ ಫ್ರಾ^ಸ್ಟನ ಕವನಗಳ ಬಗೆಗೆ ತಿಳಿವಳಿಕೆ ನೀಡಿದಿರಿ. ಧನ್ಯವಾದಗಳು. ಜೊತೆಜೊತೆಗೆ ಬೇಂದ್ರೆಯವರ ಕವನದ ಸಮಾನ
ಉದಾಹರಣೆಗಳನ್ನು ನೀಡಿದ್ದು ತುಂಬ ಸೊಗಸಾಗಿದೆ.

kanasu said...

ತುಂಬಾ ಥ್ಯಾಂಕ್ಸ್ ಗುರು ಅವರೇ

kanasu said...

ಮೆಚ್ಚುಗೆಗಾಗಿ ಥ್ಯಾಂಕ್ಸ್ ಕಾ ಕಾ :)

ಜಲನಯನ said...

ಒಳ್ಳೆಯ ಲೇಖನ, ಮಾಹಿತಿಪೂರ್ಣ ನನಗೆ ...ಮತ್ತೆ ಹೋಲಿಕೆಯನ್ನೂ ನೀಡಿದ್ದೀರಿ...

kanasu said...

thank you Jalanayana sir! welcome to my blog :)

ಭಾಶೇ said...

ಹೇಯ್! ಲೇಖನ ತುಂಬಾ ಚೆನ್ನಾಗಿದೆ!
ತುಂಬಾ ಆಳವಾಗಿ ಈ ಕವಿಯನ್ನು ಓದಿರುವ ಹಾಗಿದೆ?

kanasu said...

thanks sowm! illa ee kaviya bagge adhyayana madalu innu sakashtide!